ವೀರಾಜಪೇಟೆ: ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ
ವೀರಾಜಪೇಟೆ, ಜೂ. 1: ಪಂಚಾಯತ್ ಕಾಮಗಾರಿಗಳಲ್ಲಿ ಕಾನೂನು ಬಾಹಿರ ಏಕವ್ಯಕ್ತಿ ಟೆಂಡರ್ ವ್ಯವಸ್ಥೆಯನ್ನು ಪ್ರೋತ್ಸಾಹಿಸದಂತೆ ವೀರಾಜಪೇಟೆ ಪಟ್ಟಣ ಪಂಚಾಯತ್ ತೀರ್ಮಾನಿಸಿತು. ಬುಧವಾರ ನಡೆದ ಪಂಚಾಯತ್ ಸಾಮಾನ್ಯ ಮಾಸಿಕ ಸಭೆಯಲ್ಲಿ ಕಾಮಗಾರಿಗಳಿಗೆ ಏಕವ್ಯಕ್ತಿಗಳು ಮಾತ್ರ ಟೆಂಡರ್ ಹಾಕುತ್ತಿದ್ದು ಇದು ಸರಕಾರದ ನಿಯಮಗಳಿಗೆ ವಿರುದ್ಧವಾಗಿದ್ದು ಇದನ್ನು ಪ್ರೋತ್ಸಾಹಿಸಬಾರದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಜೆಡಿಎಸ್‌ನ ಸದಸ್ಯ ಎಸ್.ಎಚ್.ಮತೀನ್ ಆಕ್ಷೇಪ ಎತ್ತಿ ಸಿಂಗಲ್ ಟೆಂಡರ್‌ನಿಂದಾಗಿ ಅವ್ಯವಹಾರಗಳು ನಡೆಯುತ್ತಿದ್ದು ಇದಕ್ಕೆ ಅವಕಾಶ ನೀಡಬಾರದು. ಪಂಚಾಯತ್ ಕಾಮಗಾರಿಗಳು ಗರಿಷ್ಠ ಪಾರದರ್ಶಕತೆಯಿಂದ ಕೂಡಿರಬೇಕು ಎಂದು ಹೇಳಿದರು. ಇತರ ಪಕ್ಷಗಳ ಸದಸ್ಯರುಗಳು ಈ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿದರು. ಪಂಚಾಯತ್‌ನ ತ್ಯಾಜ್ಯ ವಿಲೇವಾರಿ ಪ್ರದೇಶ ನಗರದಿಂದ 5ಕಿ.ಮೀ.ದೂರದ ಪೆರಂಬಾಡಿಯಲ್ಲಿದ್ದು, ಈ ಪ್ರದೇಶಕ್ಕೆ ಹೊರರಾಜ್ಯದ ವಾಹನಗಳಲ್ಲಿ ಕಸಗಳನ್ನು ತಂದು ನಿಕ್ಷೇಪಿಸುತ್ತಿದ್ದು, ಇದನ್ನು ತಡೆಯಲು ಪಂಚಾಯತ್ ಕಾವಲು ವ್ಯವಸ್ಥೆಯನ್ನು ಮಾಡಬೇಕು ಎಂದು ನಾಮನಿರ್ದೇಶಿತ ಸದಸ್ಯ ಡಿ.ಪಿ.ರಾಜೇಶ್ ಒತ್ತಾಯಿಸಿದರು. ಪಟ್ಟಣದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಪಟ್ಟಣ ವ್ಯಾಪ್ತಿಯಲ್ಲಿರುವ ತೆರೆದ ಬಾವಿ, ಬೋರ್‌ವೆಲ್ ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಕೆರೆಗಳನ್ನು ವೈಜ್ಞಾನಿಕ ರೀತಿಯಲ್ಲಿ ದುರಸ್ತಿಪಡಿಸಿ, ಶುಚಿಗೊಳಿಸಿ ಜನರಿಗೆ ಕುಡಿಯುವ ನೀರು ಒದಗಿಸುವಂತಾಗಬೇಕು ಎಂದು ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಹೇಳಿದರು.
ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಮಳಿಗೆಗಳು ಹಾಗೂ ಬೃಹತ್ ಮನೆಗಳ ಕಾರ್ಮಿಕರುಗಳಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲದೆ ಇರುವುದರಿಂದ ನೈರ್ಮಲ್ಯದ ಸಮಸ್ಯೆ ಉಂಟಾಗಿರುವ ಬಗ್ಗೆ ಕೆಲವು ಸದಸ್ಯರುಗಳು ಆಕ್ಷೇಪ ಎತ್ತಿದರು. ಪಂಚಾಯತ್‌ಗೆ ಸೇರಿದ ಅಂಗಡಿ ಮಳಿಗೆಗಳನ್ನು ಕನಿಷ್ಠ ಬಾಡಿಗೆಗೆ ಪಡೆದು ಅವುಗಳನ್ನು ದುಬಾರಿ ದಿನ ಬಾಡಿಗೆಗೆ ನೀಡುವುದಾಗಿ ಕಂಡುಬಂದಿದ್ದು ಪಂಚಾಯತ್‌ನ ಕೆಲವು ಸದಸ್ಯರು ಹಾಗೂ ಮಾಜಿ ಸದಸ್ಯರು ಇದರಲ್ಲಿ ಸೇರಿರುವುದಾಗಿ ಕೆಲವು ಸದಸ್ಯರು ಆರೋಪಿಸಿದರು. ಪಪಂ ವತಿಯಿಂದ ಹಿಂದುಳಿದ ವರ್ಗಗಳಿಗೆ ಕಡಿಮೆ ದರದಲ್ಲಿ ನೀಡುತ್ತಿರುವ ಅಡುಗೆ ಅನಿಲ ಸಂಪರ್ಕಕ್ಕೆ ಅನಿಲ ವಿತರಕರು ಹೆಚ್ಚಿನ ಹಣವನ್ನು ನೀಡುವಂತೆ ಒತ್ತಾಯಿಸುತ್ತಿರುವುದರ ಬಗ್ಗೆ ಸೂಕ್ತ ತನಿಖೆ ಆಗಲಿ ಎಂದು ನಾಮನಿರ್ದೇಶಿತ ಸದಸ್ಯ ಮುಹಮ್ಮದ್ ರಾಫಿ ಹೇಳಿದರು. ಪಟ್ಟಣದ ಎಲ್ಲ ವಿಭಾಗಗಳಿಗೆ ಸಮರ್ಪಕ ನಲ್ಲಿ ನೀರು ಪೂರೈಸಲು ಬೇತರಿಯ ಮೂಲ ಸ್ಥಾವರದ ಹೂಳನ್ನು ಹಾಗೂ ಅದರ ಪಕ್ಕದಲ್ಲಿ ಜಾಕ್‌ವೆಲ್‌ನಲ್ಲಿ ತುಂಬಿರುವ ಮರಳನ್ನು ತೆಗೆದು ಶುದ್ಧಗೊಳಿಸಿ ನಲ್ಲಿನೀರು ಪೂರೈಕೆ ಇನ್ನಷ್ಟು ಸುಲಭಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧ್ಯಕ್ಷ ಸಚಿನ್ ಕುಟ್ಟಯ್ಯ ಭರವಸೆ ನೀಡಿದರು ಹಾಗೂ ಪಂಚಾಯತ್ ಕಟ್ಟಡದ ಬಾಡಿಗೆದಾರರ ಕುರಿತು ವಿವರಗಳನ್ನು ಮುಂದಿನ ದಿನಗಳಲ್ಲಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಮ್ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ.ಸುನೀತಾ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್‌ಹಾಗೂ ಕಿರಿಯ ಅಭಿಯಂತರ ಹೇಮ್ ಕುಮಾರ್ ಹಾಜರಿದ್ದರು.