×
Ad

ಇಂದು ಸರಕಾರಿ ಸೇವೆಗೆ ಗೈರಾಗಿ ಪ್ರತಿಭಟನೆ

Update: 2016-06-01 22:08 IST

ಕಾರವಾರ, ಜೂ.1: ವೈದ್ಯಕೀಯ, ಅಗ್ನಿಶಾಮಕದಂತಹ ತುರ್ತು ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಸರಕಾರಿ ಸೇವೆಯ ಸಿಬ್ಬಂದಿ ಜೂ.2ರಂದು ಕಚೇರಿಗೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ್ ನಾಯ್ಕ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇತನ ತಾರತಮ್ಯ ನೀತಿಯನ್ನು ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸರಕಾರಿ ನೌಕಕರರು ಪ್ರತಿಭಟನೆಗಿಳಿಯುವದರಿಂದ ಸಾರ್ವಜನಿಕರಿಗೆ ತೊಂದರೆಯಾಗುವದು ಸಹಜ. ಇದನ್ನು ಸರಿದೂಗಿಸಲು ರಾತ್ರಿ ವೇಳೆ ಕೆಲಸ ಮಾಡಿಯಾದರೂ ಇತರೆ ಕೆಲಸ ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಜೂ.4ರಂದು ಪೊಲೀಸ್ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆಗೆ ಕೂಡ ಇತರೆ ಸರಕಾರಿ ನೌಕರರ ಬೆಂಬಲವಿದೆ ಎಂದು ಸ್ಪಷ್ಟ ಪಡಿಸಿದರು. ಸರಕಾರಿ ಸೇವೆಯಲ್ಲಿರುವವರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜನಸಾಮಾನ್ಯರಿಗಾಗಿ ವಿವಿಧ ಭಾಗ್ಯಗಳನ್ನು ನೀಡಿದ ಮುಖ್ಯಮಂತ್ರಿಗಳು ಸರಕಾರಿ ನೌಕರರಿಗೆ ಯಾವದೇ ಯೋಜನೆ ರೂಪಿಸಿಲ್ಲ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ ಸರಕಾರಿ ನೌಕರರು ಅತ್ಯಂತ ಕಡಿಮೆ ವೇತನದೊಂದಿಗೆ ಹೆಚ್ಚುವರಿಯಾಗಿ ದುಡಿಯುತ್ತಿದ್ದಾರೆ ಎಂದು ವಿವರಿಸಿದರು.

ಕೇಂದ್ರ ಸರಕಾರದ ನೌಕರರಿಗೆ ಸಮಾನಾಂತರವಾಗಿ ರಾಜ್ಯ ಸರಕಾರದ ನೌಕರರಿಗೆ ವೇತನ, ಭತ್ತೆ ಹಾಗೂ ಇನ್ನಿತರ ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ತುರ್ತು ಸೇವೆಗಳಾದ ವೈದ್ಯಕೀಯ ಹಾಗೂ ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ ಅವರಿಗೂ ಸರಕಾರಿ ಸವಲತ್ತುಗಳ ಅವಶ್ಯಕತೆ ಅನಿವಾರ್ಯವಾಗಿದೆ ಎಂದು ಹೇಳಿದರು. ಪದಾಧಿಕಾರಿಗಳಾದ ರವೀಶ್ ನಾಯಕ, ಸಂಜೀವ ಶೇಜವಾಡಕರ್, ಆರ್.ವಿ.ಶೆಟ್ಟಿ, ಎಲ್.ಪಿ.ನಾಯ್ಕ, ಶಂಕರ ಹರಿಕಂತ್ರ ಇತರರಿದ್ದರು.

ಪ್ರತಿಭಟನೆಗೆ ಬೆಂಬಲ: ರಾಜ್ಯ ಸರಕಾರಿ ನೌಕರರ ಮುಷ್ಕರಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಲಿಖಿತ ಹೇಳಿಕೆ ನೀಡಿರುವ ಅವರು ಕೇಂದ್ರ ಸರಕಾರಿ ನೌಕರರ ಹಾಗೂ ರಾಜ್ಯ ಸರಕಾರಿ ನೌಕರರ ವೇತನ ಸೌಲಭ್ಯದಲ್ಲಿ ಸಾಕಷ್ಟು ತಾರತಮ್ಯವಿದೆ. ಇದನ್ನು ಸರಿಪಡಿಸುವದು ಸರಕಾರದ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ನೌಕರರು ನಡೆಸುವ ಮುಷ್ಕರ ನ್ಯಾಯಯುತವಾಗಿದೆ. ಸರಕಾರ ತನ್ನ ಸೇವೆ ಮಾಡುವ ಸಿಬ್ಬಂದಿಗೆ ಕಾಲ ಕಾಲಕ್ಕೆ ವೇತನ ಏರಿಗೆ, ಭತ್ತೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸುವಂತೆ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News