×
Ad

ಬಿಪಿಎಲ್ ಅರ್ಜಿ ವಿಲೇವಾರಿ ವಿಳಂಬ: ಕಾಂಗ್ರೆಸ್‌ ಆಕ್ಷೇಪ

Update: 2016-06-01 22:13 IST

 ಶಿವಮೊಗ್ಗ, ಜೂ. 1: ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಪಡಿತರ ಚೀಟಿ ಕೋರಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯು ನಗರದ ಡಿ.ಸಿ. ಕಚೇರಿಯಲ್ಲಿ ಆಹಾರ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿತು. ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿ ಕೋರಿ 35,242 ನಾಗರಿಕರು ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗದಲ್ಲಿ ಅತೀ ಹೆಚ್ಚು 7,776, ಭದ್ರಾವತಿಯಲ್ಲಿ 5,301, ತೀರ್ಥಹಳ್ಳಿ 2,030, ಸಾಗರ 5,097, ಹೊಸನಗರ 3,199, ಸೊರಬ 6,429 ಹಾಗೂ ಶಿಕಾರಿಪುರ ತಾಲೂಕಿನಲ್ಲಿ 5,410 ಅರ್ಜಿಗಳು ಸಂದಾಯವಾಗಿವೆ ಎಂದು ಮನವಿ ಪತ್ರದಲ್ಲಿ ಮಾಹಿತಿ ನೀಡಲಾಗಿದೆ. ನಾಗರಿಕರು ಸಲ್ಲಿಸಿರುವ ಅರ್ಜಿಗಳು ಆಹಾರ ಇಲಾಖೆಯ ಪರಿಶೀಲನೆಯಲ್ಲಿವೆ. ಸಾಕಷ್ಟು ವಿಳಂಬಗತಿಯಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಇದರಿಂದ ಅರ್ಜಿ ಸಲ್ಲಿಸಿದ ನಾಗರಿಕರು ತಮ್ಮೆಲ್ಲ ಕೆಲಸಕಾರ್ಯ ಬಿಟ್ಟು ಪ್ರತಿನಿತ್ಯ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಹಣ-ಸಮಯ ವ್ಯರ್ಥವಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸಲ್ಲಿಸುವ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ಉಪಾಧ್ಯಕ್ಷ ರುದ್ರೇಶ್, ಮುಖಂಡರಾದ ರಾಮೇಗೌಡ, ವೈ.ಎಚ್.ನಾಗರಾಜ್, ಶಶಿಧರ್, ರಘು, ಇಕ್ಕೇರಿ ರಮೇಶ್ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News