ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐ ಧರಣಿ
ಚಿಕ್ಕಮಗಳೂರು, ಜೂ.1: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ಜಿಲ್ಲೆಯ ಜಿಲ್ಲಾಸ್ಪತ್ರೆಯೂ ಸೇರಿದಂತೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದ್ದು, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನರು ಸಮರ್ಪಕವಾದ ಚಿಕಿತ್ಸೆ ಪಡೆಯಲೂ ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ತಾಲೂಕಿನಾದ್ಯಂತ ಸಮರ್ಪಕ ವಿದ್ಯುತ್ ನೀಡದೆ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ವಾರಗಟ್ಟಲೇ ವಿದ್ಯುತ್ ನೀಡದೆ ಗ್ರಾಮೀಣ ಭಾಗದ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಸಮರ್ಪಕವಾಗಿ ವಿದ್ಯುತ್ ನೀಡಲು ಕ್ರಮಕೈಗೊಳ್ಳಬೇಕು ಹಾಗೂ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ನಗರ ಹಾಗೂ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯ ನಿವೇಶನ ರಹಿತರಿದ್ದು, ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಅಂತವರನ್ನು ಗುರುತಿಸಿ ಅವರಿಗೆ ನಿವೇಶನ ಮತ್ತು ಹಕ್ಕುಪತ್ರವನ್ನು ನೀಡಬೇಕು. ಬಡ ರೈತರ ಜೀವನಕ್ಕಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಯನ್ನು ನಡೆಸುತ್ತಿದ್ದು, ಅಂತಹ ಬಡ ರೈತರ ಒತ್ತುವರಿ ಜಾಗವನ್ನು ಸಕ್ರಮ ಮಾಡಿಕೊಡಬೇಕೆಂದು ಧರಣಿನಿರತರು ಆಗ್ರಹಿಸಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಕಳಪೆ ಕಾಮಗಾರಿ ಪರಿಣಾಮ ಬಹುತೇಕ ರಸ್ತೆಗಳು ಹಾಳಾಗಿದ್ದು, ಕೂಡಲೇ ಶಿಥಿಲಗೊಂಡಿರುವ ರಸ್ತೆಗಳನ್ನು ದುರಸ್ತಿಪಡಿಸಬೇಕು. ಕಳಪೆ ಕಾಮಗಾರಿ ಮಾಡಿ ಸರಕಾರದ ಹಣ ಪೋಲಾಗಲು ಕಾರಣರಾದವರ ವಿರುದ್ಧ ಕ್ರಮ ಜರಗಿಸಬೇಕು. ನಗರಸಭೆ ಸೇರಿದಂತೆ ಪಂಚಾಯತ್ ಮಟ್ಟದಲ್ಲಿ ಶುಚಿತ್ವಕ್ಕೆ ಕ್ರಮ ಕೈಗೊಳ್ಳದೆ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಈ ಬಗ್ಗೆ ನಗರಸಭೆ ಹಾಗೂ ಗ್ರಾಪಂಗಳು ಶುಚಿತ್ವಕ್ಕೆ ಆದ್ಯತೆ ನೀಡುವುದರೊಂದಿಗೆ ರೋಗಗಳು ಹರಡದಂತೆ ಕ್ರಮಕೈಗೊಳ್ಳಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಭವಿಷ್ಯದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದುಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಿಪಿಐ ತಾಲೂಕು ಕಾರ್ಯದರ್ಶಿ ಜಾಜ್ ಆಸ್ಟಿನ್, ಕೆರೆಮನೆ ರಮೇಶ್, ರಾಧಾ ಸುಂದರೇಶ್ ಮತ್ತಿತರರು ಉಪಸ್ಥಿತರಿದ್ದರು.