ಪೊಲೀಸ್ ಇಲಾಖೆಯ ಸಮಸ್ಯೆಗಳ ಪರಿಹಾರಕ್ಕೆ ದಲಿತ್ ಜನ ಸೇನಾ ಒತ್ತಾಯ
ಚಿಕ್ಕಮಗಳೂರು, ಜೂ.1: ಪೊಲೀಸರ ವಿವಿಧ ಬೇಡಿಕೆಗಳನ್ನು ರಾಜ್ಯ ಸರಕಾರ ತಕ್ಷಣ ಈಡೇರಿಸುವಂತೆ ಒತ್ತಾಯಿಸಿ ದಲಿತ್ ಜನ ಸೇನಾ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪೊಲೀಸರು ಪ್ರತಿಭಟನೆ ಕೈಗೊಂಡಿರುವ ವಿಚಾರದಲ್ಲಿ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಬ್ರಿಟಿಷ್ ಕಾಲದಿಂದಲೂ ಜನ ಸಾಮಾನ್ಯರಿಗೆ ಕಷ್ಟದ ನೋವಿನಲ್ಲೂ ಸ್ಪಂದಿಸುತ್ತಿದ್ದ ಇಲಾಖೆ ಒಂದು ದಿನ ವೌನ ತಾಳಿದರೆ ಆಗುವ ಅನಾಹುತ ಏನೆಂಬುದು ಊಹಿಸಲಿಕ್ಕೂ ಅಸಾಧ್ಯ. ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಇವೆರೆಡು ಸಮಾಜದ ಎರಡು ಕಣ್ಣುಗಳಿದ್ದಂತೆ ಒಂದು ದಿನದ ಮಟ್ಟಿಗೆ ಇವು ನಿಷ್ಕ್ರಿಯವಾದರೆ ಸಾರ್ವಜನಿಕ ಜೀವನಕ್ಕೆ ಆಗುವ ನಷ್ಟ ಅಪಾರ ಎಂದಿದ್ದಾರೆ.
ಸಿಬ್ಬಂದಿ ಕೊರತೆಯಿಂದ ರಾಜ್ಯಾದ್ಯಂತ 8ಗಂಟೆ ಕಾರ್ಯ ನಿರ್ವಹಿಸಬೇಕಾದ ಸಿಬ್ಬಂದಿ 12 ರಿಂದ 14ಗಂಟೆಗಳವರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ ನೀಡಬೇಕು. ತಿಂಗಳಿಗೆ 4ದಿನ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಹೆಚ್ಚುವರಿ ಭತ್ತೆಯನ್ನು ನೀಡಬೇಕು. ಸರಕಾರಿ ರಜಾ ದಿನಗಳಲ್ಲಿ ವಿಶೇಷ ಭತ್ತೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಹಿರೇಮಗಳೂರು, ಮಹಿಳಾ ಜಿಲ್ಲಾಧ್ಯಕ್ಷೆ ಸ್ವರ್ಣಗೌರಿ, ನಗರಾಧ್ಯಕ್ಷ ಜೆ.ಸತ್ಯನಾರಾಯಣ, ಯುವ ಘಟಕ ಅಧ್ಯಕ್ಷ ಅರುಣ್‌ಕುಮಾರ್, ಮಹಿಳಾ ಕಾರ್ಯದರ್ಶಿ ಆಶಾ, ವಿದ್ಯಾರ್ಥಿ ಘಟಕ ಕಾರ್ಯದರ್ಶಿ, ಅಮಿತ್‌ಕುಮಾರ್, ಪುನಿತ್, ವಿದ್ಯಾರ್ಥಿ ಘಟಕ ಅಧ್ಯಕ್ಷ ಶರತ್‌ಕುಮಾರ್, ಕಾರ್ಯದರ್ಶಿ ಇಕ್ಬಾಲ್, ಮಲ್ಲಿಕ್‌ಕುಮಾರ್, ನಗರ ಕಾರ್ಯದರ್ಶಿ ಅರುಣ್ ಜಿ.ಸ.ಕಾರ್ಯದರ್ಶಿಗಳು ದೇವು, ಚೇತನ್‌ಕುಮಾರ್, ಮೋಹನ್, ಶ್ರೀನಿವಾಸ್, ಸದಸ್ಯರಾದ ಸುನಿಲ್, ಮಂಜುನಾಥ್, ಮಂಜು, ಸಂಜು, ಗೌತಮ್, ಸೋಮಲಿಂಗು, ವರಣ್ ಮತ್ತಿತರರು ಉಪಸ್ಥಿತರಿದ್ದರು.