ಯುಜಿಡಿ ಕಾಮಗಾರಿ: ಬಿಎಸ್ಸೆನ್ನೆಲ್‌ಗೆ ತಪ್ಪದ ಕಿರಿಕಿರಿ
*ಇಮ್ರಾನ್ ಸಾಗರ್
ಸಾಗರ, ಜೂ.1: ಪರಸ್ಪರ 2ಇಲಾಖೆ ನಡುವೆ ಹೊಂದಾಣಿಕೆ ಕೊರತೆಯಾದರೆ ಗ್ರಾಹಕರು ಎಂತಹ ಪರಿಪಾಟ ಅನುಭವಿಸಬೇಕು ಎಂಬುದಕ್ಕೆ ಉದಾಹರಣೆ ಪಟ್ಟಣದಲ್ಲಿ ನಡೆಯುತ್ತಿದೆ. ನಿಜ, ಪಟ್ಟಣದಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದೆ. ಇದು ಎಲ್ಲೆಲ್ಲಿ ಹೇಗೆ ನಡೆಯಬೇಕೋ ಜನರಿಗಂತೂ ಗೊತ್ತಿಲ್ಲ. ಆದರೆ ಈ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇನ್ನೂ ವರ್ಷಾನುಗಟ್ಟಲೆ ಬೇಕೇನೋ! ಯಾಕೆಂದರೆ ಶ್ರೀರಾಂಪುರ ಬಡಾವಣೆಯ ವೆಂಕಟರಮಣ ದೇವಸ್ಥಾನದ ಹಿಂಭಾಗದ ಮೈದಾನದಲ್ಲಿ ರಾಶಿ ರಾಶಿ ಹಾಕಿದ ಪೈಪ್‌ಗಳೇ ಕಾಮಗಾರಿಯ ಪ್ರಗತಿಗೆ ಸಾಕ್ಷಿ ಹೇಳುತ್ತವೆ. ಒಂದಿಷ್ಟು ಕಡೆ ರಸ್ತೆ ನಡುವೆ 40ರಿಂದ 50ಅಡಿಗಳಷ್ಟು ಆಳ ಅಗೆದು ಪೈಪು ಜೋಡಿಸಲಾಗುತ್ತಿದೆ. ಹೀಗೆ ಅಗೆಯಲಾದ ಗುಂಡಿಯನ್ನು ನಂತರ ವೈಜ್ಞಾನಿಕವಾಗಿ ಮುಚ್ಚುತ್ತಿಲ್ಲ. ಇದರ ನೈಜ ಚಿತ್ರಣ ಗೊತ್ತಾಗ ಬೇಕೆಂದರೆ ಮಳೆಗಾಲ ಕಾಲಿಡಬೇಕು! ಎಲ್ಲೆಲ್ಲಿಎಷ್ಟು ವಾಹನ ಹುಗಿದು ಕುಳಿತು ಕೊಳ್ಳುತ್ತವೋ ನೋಡಬೇಕಷ್ಟೆ.
ಬಿಎಸ್ಸೆನ್ನೆಲ್ ಸುಧಾರಣಾ ಮಾರ್ಗದತ್ತ ಸಾಗುತ್ತಿದೆ. ಸಾಕಷ್ಟು ತಾಂತ್ರಿಕ ಬದಲಾವಣೆಯಾಗುತ್ತಿವೆ. ಮೊಬೈಲ್ ಯುಗದಲ್ಲೂ ಕೇಬಲ್ ಕನೆಕ್ಷನ್ ಬೇಕು. ಲ್ಯಾಂಡ್‌ಲೈನ್ ಬಳಸಿ ನೆಟ್ ಕನೆಕ್ಷನ್ ಮೂಲಕ ವ್ಯವಹಾರಸ್ಥರು, ಉದ್ಯೋಗಿಗಳು, ಕಂಪೆನಿಗಳು ಕೆಲಸ ನಿರ್ವಹಿಸುತ್ತಿವೆ. ಮೊದಲೆಲ್ಲ ಟೆಲಿಫೋನ್ ಇಲಾಖೆಯೂ ರಸ್ತೆ ಪಕ್ಕ ಕಂಬ ನೆಟ್ಟು ತಂತಿ ಮೂಲಕ ಕೇಬಲ್ ಒಯ್ದು ಲ್ಯಾಂಡ್‌ಲೈನ್‌ಗೆ ಸಂಪರ್ಕ ಕಲ್ಪಿಸುತ್ತಿದ್ದರು. ಬದಲಾದ ಸಂಪರ್ಕ ಸುಧಾರಣೆ ಯಲ್ಲೀಗ ಆಪ್ಟಿಕಲ್ ಕೇಬಲ್ ಬಂದಿದ್ದು, ಭೂಮಿಯ ಒಳಗೆ ಅಂತರ್ಗತವಾಗಿ ಕೇಬಲ್ ಅಳವಡಿಸಿ ಸಂಪರ್ಕ ನೀಡಲಾಗುತ್ತಿದೆ. ಹೀಗೆ ಕೇಬಲ್ ಅಳವಡಿಕೆಯನ್ನು ಬಿಎಸ್ಸೆನ್ನೆಲ್ ಜಾಗೃತೆಯಿಂದ ನಿರ್ವಹಿಸಿದೆ. ಆದರೂ ನಗರಸಭೆಯ ಚರಂಡಿ ಕಾಮಗಾರಿ, ಪೈಪ್‌ಪೈನ್ ಅಳವಡಿಸುವ ಸಂದರ್ಭ ಕೇಬಲ್‌ಗಳಿಗೆ ಧಕ್ಕೆಯಾಗುವ ಸಂದರ್ಭಗಳಿವೆ. ಆದರೂ ಇಂತಹ ಅನಾಹುತ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ ಎಂದೇ ಹೇಳಬಹುದು.
ಆದರೆ ಈಗ ಯುಜಿಡಿ ಕಾಮಗಾರಿ ಅವಾಂತರ ದೂರವಾಣಿ ಕೇಬಲ್‌ಗಳನ್ನು ಅಸ್ತವ್ಯಸ್ತಗೊಳಿಸುತ್ತಿವೆ. ಕಾಮಗಾರಿಗೆ ಭೂಮಿಯ ಒಡಲು ಬಗೆಯುವ ಸಂದರ್ಭದಲ್ಲಿ ಸಿಗುವ ದೂರವಾಣಿ ಕೇಬಲ್‌ಗಳನ್ನು ಬೇಕಾಬಿಟ್ಟಿ ಚಿಂದಿ ಮಾಡಲಾಗುತ್ತದೆ. ಅಗಡಿ ಮಠದ ಸಮೀಪ ಮಾಡಿರುವ ಕಾಮಗಾರಿಯ ಚಿತ್ರಣ ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಕಳೆದ 6-7ದಿನಗಳಿಂದ ವೆಂಕಟರಮಣ ದೇವಸ್ಥಾನದ ಎದುರು ಯುಜಿಡಿ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ದೂರವಾಣಿ ಕೇಬಲ್‌ಗಳನ್ನು ಕಟ್ ಮಾಡಲಾಗಿದೆ. ಇದರಿಂದ ಅಣಲೆಕೊಪ್ಪ ಬಡಾವಣೆಯ ಸುಮಾರು 200ಗ್ರಾಹಕರಿಗೆ ಲ್ಯಾಂಡ್ ಲೈನ್ ಸಂಪರ್ಕವಿಲ್ಲದಂತಾಗಿದೆ.
ಅಂತೂ ಯುಜಿಡಿ ಕಾಮಗಾರಿ ಮುಗಿಯುವವರೆಗೂ ದೂರವಾಣಿ ಗ್ರಾಹಕರ ಪರಿಪಾಟಲಿಗೆ ಅಂತ್ಯ ಕಾಣುವುದಿಲ್ಲ!
ಕಾಮಗಾರಿ ವಿಷಯ ಹೇಳುತ್ತಿಲ್ಲ: ಒಳಚರಂಡಿ ಕಾಮಗಾರಿ ಕುರಿತು ನಿರ್ದಿಷ್ಟವಾಗಿ ಇಲಾಖೆ ತಿಳಿಸುತ್ತಿಲ್ಲ. ಇದ್ದಕ್ಕಿದ್ದ ಹಾಗೆ ಕೇಬಲ್‌ಗಳನ್ನು ಕಟ್ ಮಾಡುತ್ತಾರೆ. ಮೊದಲೇ ತಿಳಿಸಿದರೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು. ಕಟ್ ಮಾಡಲಾದ ಕೇಬಲ್‌ಗಳನ್ನು ಜೋಡಿಸುವುದು ಹೆಚ್ಚು ಸಮಯ ಬೇಡುತ್ತದೆ. ಯಾವ ಹೊತ್ತಲ್ಲಿ ಎಲ್ಲಿ ಕೇಬಲ್ ಅಗೆಯುತ್ತಾರೆ ಎಂಬ ಮಾಹಿತಿ ತಮಗೆ ಹೇಳುವುದಿಲ್ಲ ಎಂಬುದು ಬಿಎಸ್ಸೆನ್ನೆಲ್ ಇಂಜಿನಿಯರ್ ದೂರುತ್ತಾರೆ.