ಬಂಧಿತ ಪೊಲೀಸ್ ಶಶಿಧರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ
Update: 2016-06-02 11:03 IST
ಬೆಂಗಳೂರು, ಜೂ.2: ರಾಜ್ಯದ ಪೊಲೀಸ್ ಸಿಬ್ಬಂದಿಗಳು ಜೂ.4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ಕರೆ ನೀಡಿ ಇದೀಗ ಜೈಲು ಸೇರಿರುವ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಅವರು ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಅನಾರೋಗ್ಯ, ಬಿಪಿ, ಶುಗರ್ ಕಾಯಿಲೆ ಇರುವ ಹಿನ್ನೆಲೆಯಲ್ಲಿ ಆಹಾರ ಸೇವಿಸಲು ಶಶಿಧರ‍್ ಅವರಿಗೆ ಜೈಲು ಸಿಬ್ಬಂದಿಗಳು ಒತ್ತಾಯಿಸುತ್ತಿದ್ದರೂ, ಅವರು ಪಟ್ಟು ಬಿಡದೆ ಉಪವಾಸ ಸತ್ಯಾಗ್ರಹದ ನಿರ್ಧಾರ ಕೈಗೊಂಡಿದ್ದಾರೆ.ನ್ಯಾಯ ಸಿಗುವವರೆಗೂ ಆಹಾರ ಸೇವಿಸದೆ ಹೋರಾಟ ಮುಂದುವರಿಸುವುದಾಗಿ ಶಶಿಧರ್ ಹೇಳಿದ್ದಾರೆ. ಶಶಿಧರ್ ಅವರನ್ನು ಬುಧವಾರ ತಡರಾತ್ರಿ ಪೊಲೀಸರು ಬಂಧಿಸಿ ಬೆಂಗಳೂರಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಅವರಿಗೆ ಜೂ.16 ತನಕ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಪೊಲೀಸರ ಮುಷ್ಕರಕ್ಕೆ ಕರೆ ನೀಡಿದ್ದ ಶಶಿಧರ್ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.