×
Ad

ಹಾಸನ: ವಾಟಾಳ್ ನಾಗರಾಜ್‌ರಿಂದ ವಿಭಿನ್ನ ಪ್ರಚಾರ

Update: 2016-06-02 18:29 IST

ಹಾಸನ, ಜೂ. 2: ಜೂನ್.9 ರಂದು ನಡೆಯಲಿರುವ ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್, ಬೆದರು ಬೊಂಬೆ, ವೀರಗಾಸೆ, ಡೋಲು ಬಾರಿಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರಚಾರ ಕೈಗೊಂಡರು.

ನಗರದ ಎನ್.ಆರ್. ವೃತ್ತದ ಬಳಿ ಸಾಂಸ್ಕೃತಿಕ ಕಲಾ ತಂಡಗಳಾದ ಬೆದರು ಬೊಂಬೆ, ವೀರಗಾಸೆ, ಡೋಲು ಬಾರಿಸಿ, ಮತ ಯಾಚಿಸುವ ಮೂಲಕ ಗಮನ ಸೆಳೆದರು. ನಂತರ ಮಾತನಾಡಿದ ಅವರು, ನಾಡು ನುಡಿಗಾಗಿ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ಗಡಿನಾಡು, ಹೊರನಾಡು ರಾಜ್ಯದ ಶಿಕ್ಷಕರ ಸಮಸ್ಯೆ ಇದ್ದು, ನಿರುದ್ಯೋಗ ಪದವಿಧರರು ಹಿಂದೆ 18 ದಿನಗಳ ಕಾಲ ಪ್ರತಿಭಟನೆ ಮಾಡಿದರೂ ಇದುವರೆಗೂ ಸರಕಾರ ಸ್ಪಂದಿಸಿಲ್ಲ ಎಂದರು. ಚುನಾವಣೆಯಲ್ಲಿ ಗೆಲ್ಲಿಸಿದರೆ ಹೋರಾಟದ ಮೂಲಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನುಡಿದರು.

ಪದವೀಧರರ, ಉಪಾಧ್ಯಾಯರ ಹಾಗೂ ಸರಕಾರಿ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದೇನೆ ಎಂದು ಹೇಳಿದರು. ಕೇಂದ್ರ ಸರಕಾರದಲ್ಲಿ ನೀಡುವ ವೇತನವನ್ನು ಕರ್ನಾಟಕ ರಾಜ್ಯದಲ್ಲೂ ನೀಡುವಂತೆ ಒತ್ತಾಯಿಸಿದರು.

ಪೊಲೀಸ್ ಇಲಾಖೆಯ ಬೇಡಿಕೆ ಈಡೇರಿಕೆಗಾಗಿ ಕಳೆದ 50 ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಮುಖ್ಯಮಂತ್ರಿಯವರು ಮಾತುಕತೆ ಮೂಲಕ ಬಗೆಹರಿಸಬೇಕೆ ಹೊರತು ಎಸ್ಮಾ ಜಾರಿ ಮಾಡಬಾರದು ಎಂದು ಸಲಹೆ ನೀಡಿದರು. ಜೂ.4 ರಂದು ನಡೆಸಲಾಗುತ್ತಿರುವ ಹೋರಾಟಕ್ಕೆ ನಾವು ಕೂಡ ಬೆಂಬಲ ನೀಡುವುದಾಗಿ ಇದೇ ವೇಳೆ ತಿಳಿಸಿದರು. ಎಲ್ಲಾ ಪದವಿಧರರು ಪ್ರಥಮ ಆದ್ಯತೆ ಮತ ನೀಡಿ ಗೆಲುವಿಗೆ ಸಹಕರಿಸಲು ಇದೆ ವೇಳೆ ಮನವಿ ಮಾಡಿದರು.

ಚುನಾವಣೆ ಪ್ರಚಾರದಲ್ಲಿ ರೈತ ಮುಖಂಡರು ಮಂಜುನಾಥ್ ಯಾಧವ್, ಡಾ.ರಾಜಕುಮಾರ್ ಅಭಿಮಾನಿ ಸಂಘದ ಗೌರವಾಧ್ಯಕ್ಷ ಬಾಳ್ಳುಗೋಪಾಲ್, ಕರ್ನಾಟಕ ವೀರಕನ್ನಡಿಗರ ಸೇನೆಯ ಜಿಲ್ಲಾಧ್ಯಕ್ಷ ದಿನೇಶ್, ರಾಜ್ಯ ಕಾರ್ಯಕಾರಿ ಸದಸ್ಯ ಶಂಕರಗೌಡ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News