×
Ad

ರಾಜ್ಯದಲ್ಲಿ ಮಿನಿ ತುರ್ತುಪರಿಸ್ಥಿತಿ ತರಲು ಕಾಂಗ್ರೆಸ್ ಮುಖಂಡರಿಂದ ಪ್ರಯತ್ನ: ಎಚ್.ಡಿ. ರೇವಣ್ಣ

Update: 2016-06-02 19:33 IST

ಹಾಸನ, ಜೂ.2: ಹಿಂದೆ ದೇಶದಲ್ಲಿ ಇಂದಿರಗಾಂಧಿ ಆಡಳಿತದಲ್ಲಿ ತಂದ ತುರ್ತು ಪರಿಸ್ಥಿತಿಯನ್ನು ಈಗ ಕರ್ನಾಟಕ ರಾಜ್ಯದಲ್ಲಿ ತರಲು ಕಾಂಗ್ರೆಸ್ ಮುಖಂಡರು ಹೊರಟಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ.

ನಗರದ ಕೆ.ಆರ್. ಪುರಂನಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 50 ವರ್ಷದಲ್ಲಿ ಕಾಂಗ್ರೆಸ್ ಸರಕಾರ ಮಾಡದ ಕೆಲಸವನ್ನು ರಾಜ್ಯದಲ್ಲಿ ಜೆಡಿಎಸ್ ಆಡಳಿತದಲ್ಲಿ ಮಾಡಿದೆ. ಪೊಲೀಸರು ಇದೇ ತಿಂಗಳು 4 ರಂದು ನಡೆಸುತ್ತಿರುವ ಸಾಮೂಹಿಕ ಮುಷ್ಕರ ನಿಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ, ಹಾಗೂ ಮಂತ್ರಿಗಳು ಪರದಾಡಿದ್ದು, ಈಗ ಅವರ ಮೇಲೆ ಎಸ್ಮಾ ಜಾರಿ ಮಾಡಲು ಮುಂದಾಗಿದ್ದಾರೆ. ಇಂತಹ ನಿರ್ಧಾರ ಬಿಟ್ಟು ಪೊಲೀಸರೊಂದಿಗೆ ಚರ್ಚಿಸಿ ಇತ್ಯರ್ಥ ಮಾಡಲು ಸಲಹೆ ನೀಡಿದರು.

ಸರಕಾರಿ ನೌಕರರು ಎಲ್ಲರೂ ಭ್ರಷ್ಟರಲ್ಲ. ಯಾರೋ ಕೆಲವರು ಮಾಡಿದ ತಪ್ಪಿನಿಂದ ಎಲ್ಲರ ಮೇಲೆ ಹೊಣೆ ಹೊರಿಸುವುದು ಸರಿಯಲ್ಲ ಎಂದರು. ಸರಕಾರ ಸರಕಾರಿ ನೌಕರರ ಮುಷ್ಕರಕ್ಕೆ ಅವಕಾಶ ಕೊಡದೆ ಬೇಡಿಕೆ ಈಡೇರಿಸಬೇಕು. ಒಂದು ಕಡೆ ಪೊಲೀಸರು ಮತ್ತೊಂದು ಕಡೆ ಸರಕಾರಿ ನೌಕರರು ಮುಷ್ಕರ ಮಾಡಿದರೆ ಜನರ ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿಗೆ ಸರಿಯಾಗಿ ಬರುವುದಿಲ್ಲ. ಅವರ ಕಚೇರಿ ಅವಶ್ಯಕತೆ ಇದೆಯಾ ಎಂದು ವ್ಯಂಗ್ಯವಾಡಿದರು.

ಜೂ.9ರಂದು ನಡೆಯಲಿರುವ ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಶ್ರೀಕಂಠೇಗೌಡರಿಗೆ ಮೊದಲ ಪ್ರಾಧಾನ್ಯತೆ ಮತ ನೀಡಲು ಮನವಿ ಮಾಡಿದರು. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಶಿಕ್ಷಣದಲ್ಲಿ ಸಾಕಷ್ಟು ಬದಾಲವಣೆ ತಂದಿದ್ದರು. ರಾಜ್ಯದ ನಾನಾ ಭಾಗಗಳಲ್ಲಿ ಶಾಲಾ-ಕಾಲೇಜ್ ತಂದರು. 5 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಶಿಕ್ಷಕರ ನೇಮಕ ಹಾಗೂ ಮೂಲಭೂತ ಸೌಕರ್ಯ ನೀಡಿದ್ದಾರೆ. ಆದರೆ ಬಿಜೆಪಿ-ಕಾಂಗ್ರೆಸ್ ಸರಕಾರ ಅಂತಹ ಕೆಲಸ ಎಂದು ಮಾಡಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸರಕಾರ ಯಾವಾಗಲೂ ಖಾಸಗಿ ಜೊತೆ ಇದ್ದು, ಯಾವ ಇಲಾಖೆಯಲ್ಲಿ ಕಮಿಷನ್ ಹೆಚ್ಚು ಸಿಗುತ್ತದೆ ಅಲ್ಲಿ ಕೆಲಸವನ್ನು ಸರಕಾರ ನಿರ್ವಹಿಸುತ್ತಿದೆ ಎಂದು ದೂರಿದರು. ಸರಕಾರಿ ಕಾಲೇಜ್ ಬಾಗಿಲು ಮುಚ್ಚುವ ಕೆಲಸ ಮಾಡಿ ಖಾಸಗಿ ಕಾಲೇಜ್ ಒತ್ತಡದಲ್ಲಿ ಸರಕಾರ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಾಜ್ಯ ಸರಕಾರ ಶಾಲಾ-ಕಾಲೇಜ್‌ಗೆ ಮೂಲಭೂತ ಸೌಕರ್ಯ ನೀಡಿ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿದರು.

ಜಿಪಂ ಅಧ್ಯಕ್ಷರ ನಾಲ್ಕನೆ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ 23 ಜನ ಸದಸ್ಯರು ಸೇರಿ ತೀರ್ಮಾನವನ್ನು ಶುಕ್ರವಾರ ಬೆಳಗ್ಗೆ 9 ಗಂಟೆಗೆ ತೀರ್ಮಾನ ಮಾಡುವುದಾಗಿ ಹೇಳಿದರು. ಜಿಲ್ಲಾ ಪಂಚಾಯತ್ ನಾಲ್ಕನೆ ಸಭೆಗೂ ಜೆಡಿಎಸ್ ಸದಸ್ಯರು ಬರದೆ ಇರಲಿ ನೋಡೋಣ ಎಂದು ನನ್ನ ಮೇಲೆ ಸವಾಲು ಹಾಕಿರುವ ಜಿಲ್ಲಾ ಮಂತ್ರಿಗಳ ಮಾತಿಗೆ ಉತ್ತರಿಸಿದ ರೇವಣ್ಣ ಅವರು, 23 ಜನರ ಸದಸ್ಯತ್ವ ಹೋದರೂ ಹೋಗಲಿ, ನಾಳೆ ನಾವುಗಳು ಸಭೆ ಮಾಡಿ ಅಂತಿಮ ನಿರ್ಧಾರಕ್ಕೆ ಬರುವುದಾಗಿ ಹೇಳಿದರು. ಒಂದು ಸಭೆ ಕರೆದು ಮತ್ತೊಂದು ಸಾಮಾನ್ಯಸಭೆ ಕರೆಯಬೇಕಾದರೆ ಒಂದು ವಾರದ ಅಂತರ ಇರಬೇಕು ಎಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಲೆಕ್ಕಕ್ಕೆ ಇಲ್ಲ. ಮಧ್ಯಪ್ರದೇಶದಲ್ಲಿರುವ ಸ್ಥಿತಿಯಂತೆ ಕರ್ನಾಟಕ ರಾಜ್ಯದಲ್ಲೂ ಮುಕ್ತ ಕಾಂಗ್ರೆಸ್ ಆಗಲಿದೆ ಎಂದು ಹೇಳಿದರು.

ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎ. ಮಂಜು ತಂದೆ ಹಿಂದೆ ಏನು ಮಾಡುತ್ತಾ ಇದ್ದರೆಂಬುದು ಎಲ್ಲಾ ತಿಳಿದಿದೆ. ಮಾಜಿ ಸಚಿವ ಎಚ್.ಡಿ. ರೇವಣ್ಣರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಿಮ್ಮ ಬಗ್ಗೆ ಇರುವ ದಾಖಲೆಯನ್ನು ರಾಜ್ಯಮಟ್ಟದಲ್ಲಿ ಕ್ಯಾಸೆಟ್ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದರು.

ಇದೆ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News