ರಾಜ್ಯಸಭಾ ಚುನಾವಣೆ: ಕುಟುಕಿಸಿಕೊಂಡವರ ಪ್ರತಿಕ್ರಿಯೆ

Update: 2016-06-02 17:53 GMT

ಬೆಂಗಳೂರು, ಜೂ.2: ರಾಜ್ಯ ವಿಧಾನಸಬೆಯಿಂದ ರಾಜ್ಯಸಬೆಗೆ ಜೂನ್ 11 ರಂದು ನಡೆಯಲಿರುವ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯುತ್ತಿರುವುದನ್ನು ರಾಷ್ಟ್ರೀಯ ವಾಹಿನಿಗಳು ಬೆಳಕಿಗೆ ತಂದಿದ್ದು, ಇದು ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯುತ್ತಿರುವುದನ್ನು ಕುಟುಕು ಕಾರ್ಯಾಚರಣೆ ಮೂಲಕ ಬೆಳಕಿಗೆ ಬಂದಿದೆ. ಶಾಸಕರು ಕೋಟಿ ಕೋಟಿ ಗಟ್ಟಲೆ ಹಣದ ಬೇಡಿಕೆ ಇಟ್ಟಿರುವ ಬಗ್ಗೆ ವರದಿಯಾಗಿದೆ. ಜೆಡಿಎಸ್‌ನ ಜಿ.ಟಿ. ದೇವೇಗೌಡ, ಕೆಜೆಪಿಯ ಬಿ.ಆರ್. ಪಾಟೀಲ್ ಮತ್ತಿತರರು ಟೈಮ್ಸ್ ನೌ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಆದರೆ ಈ ಆರೋಪಗಳನ್ನು ಬಿ.ಆರ್. ಪಾಟೀಲ್ ನಿರಾಕರಿಸಿದ್ದು, ತಮ್ಮ ತಾಯಿಯ ಮೇಲೆ ಆಣೆ ಮಾಡಿದ್ದಾರೆ. ಸಂಬಂಧಪಟ್ಟ ವಾಹಿನಿಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಜಿ.ಟಿ. ದೇವೇಗೌಡ ಮಾತನಾಡಿ, ಈ ಬಗ್ಗೆ ಸಿಬಿಐ ತನಿಖೆ ನಡೆಯಲಿ. ನಾವು ಯಾರಿಗೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ತನಿಖೆಯಿಂದ ಮಾತ್ರ ಸತ್ಯ ಸಂಗತಿ ಹೊರಬರಲು ಸಾಧ್ಯ ಎಂದು ಹೇಳಿದ್ದಾರೆ.

ಈ ಬೆಳವಣಿಗೆಯಿಂದ ಆತಂಕಗೊಂಡಿರುವ ಕೇಂದ್ರ ಚುನಾವಣಾ ಆಯೋಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಚುನಾವಣೆ ಮುಂದೂಡುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಿದೆ ಎನ್ನಲಾಗಿದೆ. ಚುನಾವಣೆ ಮುಂದೂಡಿ ಅ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆಯೂ ಆಯೋಗ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಚುನಾವಣಾಧಿಕಾರಿಗಳು ಮತ್ತು ವೀಕ್ಷಕರಿಂದ ಮಾಹಿತಿ ಕೋರಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಹಣದ ಆಮೀಷ ಒಡ್ಡಿರುವವರ ಉಮೇದುವಾರಿಕೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಹಣದ ಮೂಲದ ಬಗ್ಗೆಯೂ ತನಿಖೆ ನಡೆಯಬೇಕು. ಜೆಡಿಎಸ್ ಮತ್ತು ಪಕ್ಷೇತರ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಹಣದ ಬೇಡಿಕೆ ಇಟ್ಟಿರುವುದು ಬಯಲಿಗೆ ಬಂದಿದೆ. ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News