ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೌನ ಮೆರವಣಿಗೆ

Update: 2016-06-02 16:47 GMT

ಭಟ್ಕಳ, ಜೂ.2: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಭಟ್ಕಳ ಶಾಖೆಯ ವತಿಯಿಂದ ನಗರದ ಮುಖ್ಯ ರಸ್ತೆಯಲ್ಲಿ ಮೌನ ಮೆರವಣಿಗೆ ನಡೆಸಿ ನಂತರ ಸಹಾಯಕ ಆಯುಕ್ತರ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮನವಿಯನ್ನು ಓದಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ನಾಯ್ಕ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಏಕೈಕ ಸಂಘವಾಗಿದ್ದು ಸರಕಾರ ರೂಪಿಸುವ ಹಲವಾರು ಜನಪರ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರಕಾರಿ ನೌಕರರು ಉತ್ತಮ ಕರ್ತವ್ಯ ನಿರ್ವಹಿಸಿ ಸರಕಾರಕ್ಕೆ ಉತ್ತಮ ಕೀರ್ತಿ ತರುವ ಕೆಲಸ ಮಾಡುತ್ತಾರೆ. ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ನೌಕರರ ಸರಿಸಮಾನಾದ ವೇತನ, ಭತ್ತೆಗಳನ್ನು ನೀಡಬೇಕು. ಐದು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುವ ಸಂಪ್ರದಾಯವನ್ನು ಪರಾಮರ್ಶಿಸಿದಲ್ಲಿ ರಾಜ್ಯ ಸರಕಾರವು ಇದುವರೆಗೂ 10ವೇತನ ಆಯೋಗವನ್ನು ರಚಿಸಬೇಕಾಗಿತ್ತು. ಆದರೆ 5 ಆಯೋಗಗಳು, ಮೂರು ವೇತನ ಸಮಿತಿ ಹಾಗೂ ಒಂದು ಸಚಿವ ಸಂಪುಟ ಉಪ ಸಮಿತಿ ರಚಿಸಿ ರಾಜ್ಯ ಸರಕಾರಿ ನೌಕರರ ವೇತನ ಹಾಗೂ ಭತ್ತೆಗಳನ್ನು ಪರಿಷ್ಕರಿಸಿದೆ. ರಾಜ್ಯದಲ್ಲಿಯೂ ಕೂಡಾ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತ ಚಿದಾನಂದ ವಠಾರೆ ಮುಖ್ಯಮಂತ್ರಿಗಳಿಗೆ ಕಳುಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸರಕಾರಿ ನೌಕರರ ಸಂಘದ ಕಾರ್ಯಕರ್ಶಿ ಉಮೇಶ ಕೆರೆಕಟ್ಟೆ, ಸುಧೀರ್ ಗಾಂವ್ಕರ್, ಜಿ.ಆರ್. ಭಟ್, ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ನಾಯ್ಕ, ಕಾರ್ಯದರ್ಶಿ ಗೋಪಾಲ ನಾಯ್ಕ, ಅಶೋಕ ಭಟ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಡಿ. ಆಚಾರಿ, ಸಿ.ಐ.ಟಿ.ಯು. ಸುಭಾಷ್‌ಕೊಪ್ಪಿಕರ್ ಹಾಗೂ ವಿವಿಧ ಇಲಾಖೆಯ ನೂರಾರು ನೌಕರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News