×
Ad

ಸರಕಾರಿ ನೌಕರರ ಬೇಡಿಕೆಯನ್ನು ಈಡೇರಿಸಿ: ಗಣಪತಪ್ಪ

Update: 2016-06-02 22:18 IST

ಸಾಗರ, ಜೂ.2: ಸರಕಾರ ಹಾಗೂ ಜನಸಾಮಾನ್ಯರ ನಡುವೆ ಕೊಂಡಿಯಾಗಿ ಕರ್ತವ್ಯ ನಿರ್ವಹಿಸುವ ಸರಕಾರಿ ನೌಕರರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮೀನಾಮೇಷ ಎಣಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಹೇಳಿದರು. ಇಲ್ಲಿನ ತಾಲೂಕು ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ಗುರುವಾರ ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯ ಸರಕಾರ ಸರಕಾರಿ ನೌಕರರ ಸಹನೆಯನ್ನು ಪರೀಕ್ಷಿಸುವ ಕೆಲಸ ಮಾಡಬಾರದು. ಸರಕಾರಿ ನೌಕರರು ಸರಕಾರದ ಮೇಲೆ ವಿಶ್ವಾಸವಿರಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನೌಕರರ ವಿಶ್ವಾಸವನ್ನು ಸರಕಾರಗಳು ಕಳೆದುಕೊಳ್ಳಬಾರದು. ಅನೇಕ ವರ್ಷಗಳಿಂದ ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನವಾದ ವೇತನವನ್ನು ನೀಡಿ ಎನ್ನುವ ನಮ್ಮ ಹಕ್ಕೊತ್ತಾಯಕ್ಕೆ ಬೆಲೆ ಸಿಗದೆ ಇರುವುದು ದುರದೃಷ್ಟಕರ ಎಂದರು. ಮೈಸೂರಿನಲ್ಲಿ ನಡೆದ ಸರಕಾರಿ ನೌಕರರ ಸಮ್ಮೇಳನದಲ್ಲಿ ಸಮಾನ ಕೆಲಸಕ್ಕೆ ಸಮಾನವೇತನ ನೀಡುವ ಅಂಶವನ್ನು ಪ್ರತಿಪಾದಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಪರಿಗಣಿಸುವ ಭರವಸೆ ನೀಡಿದ್ದರು. ಆದರೆ ಅದು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಐದು ವರ್ಷಗಳಿಗೊಮ್ಮೆ ವೇತನ ಆಯೋಗ ರಚಿಸುವ ಸಂಪ್ರದಾಯವನ್ನು ಮುರಿಯಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 1, 2016ರಿಂದ ಅನ್ವಯವಾಗುವಂತೆ ರಾಜ್ಯ ಸರಕಾರಿ ನೌಕರರಿಗೂ ಸಹ ಕೇಂದ್ರ ಸರಕಾರದ ಮಾದರಿಯಲ್ಲಿ 7ನೆ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ 6ನೆ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ರಚಿತವಾದ ಅಧಿಕಾರಿಗಳ ವೇತನ ಸಮಿತಿ ಮಾಡಿರುವ ಶಿಫಾರಸುಗಳು ಅವೈಜ್ಞಾನಿಕವಾಗಿದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯದ ಸರಕಾರಿ ನೌಕರರು ಅತ್ಯಂತ ಕಡಿಮೆ ವೇತನ ಹಾಗೂ ಭತ್ತೆಯನ್ನು ಪಡೆಯುತ್ತಿದ್ದಾರೆ. ಸರಕಾರ ತಕ್ಷಣ ನೌಕರರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸಂಘವು ಪೊಲೀಸರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದ ಪೊಲೀಸ್ ಮಹಾಸಂಘದ ಮುಖಂಡರನ್ನು ಬಂಧಿಸಿರುವ ಕ್ರಮ ಸರಿಯಲ್ಲ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅರಣ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನಾಗಭೂಷಣ್ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಪಂಡಿತಾರಾಧ್ಯ, ಖಜಾಂಚಿ ವಿಜಯಕುಮಾರ್, ಉಪಾಧ್ಯಕ್ಷರಾದ ಈಶ್ವರಪ್ಪ, ಜಿ.ಪರಮೇಶ್ವರ್, ನಾಗರಾಜ್, ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ ಒ.ಕೆ., ಕಾರ್ಯದರ್ಶಿ ಎಂ.ವೈ. ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News