‘ಕೃಷಿ ಯಂತ್ರೋಪಕರಣ ಹೆಚ್ಚಾಗಿ ಬಳಸಿಕೊಳ್ಳಿ: ಸಚಿವ ಕೃಷ್ಣ ಭೈರೆಗೌಡ
ದಾವಣಗೆರೆ, ಜೂ.2: ಕೃಷಿ ಚಟುವಟಿಕೆಗಳಿಗೆ ಕೃಷಿ ಕಾರ್ಮಿಕರ ಅಭಾವ ತೀವ್ರವಾಗುತ್ತಿದ್ದು ಕೃಷಿ ಕಾರ್ಯಗಳಿಗೆ ಯಂತ್ರೋಪಕರಣ ಬಳಕೆ ಹೆಚ್ಚಾಗಿ ಆಗಬೇಕಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೆಗೌಡರು ಅಭಿಪ್ರಾಯಪಟ್ಟರು.
ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಣ್ಣು ಆರೋಗ್ಯ ಅಭಿಯಾನ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಕೇವಲ ಎತ್ತುಗಳಿಂದ ಭೂಮಿ ಉತ್ತು ಬಿತ್ತಿ ಬೆಳೆಯುತ್ತಿದ್ದ ಕಾಲ ಇಂದು ದೂರವಾಗುತ್ತಿದೆ. ಅಕಾಲಿಕ ಮಳೆಯಿಂದಾಗಿ ಕೃಷಿ ಕಾರ್ಮಿಕರ ಸಂಖ್ಯೆಯು ಗಣನೀಯವಾಗಿ ಕ್ಷೀಣಿಸುತ್ತಿದ್ದು, ಯಂತ್ರೋಪಕರಣಗಳ ಬಳಕೆ ಮಾಡಿಕೊಂಡರೆ ಮಾತ್ರ ರೈತ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಈ ಯಂತ್ರೋಪಕರಣಗಳು ದುಬಾರಿ ಇದ್ದು, ಸಾಮಾನ್ಯ ರೈತರು ಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸರಕಾರದ ವತಿಯಿಂದಲೇ ರೈತರಿಗೆ ಎಟುಕುವ ಬೆಲೆಯಲ್ಲಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಸಮಯ, ಶ್ರಮ ಹಾಗೂ ಆದಾಯದಲ್ಲಿ ಬಹಳ ಉಳಿತಾಯವಾಗಲಿದೆ ಎಂದರು. ಕೃಷಿ ಕಾರ್ಯಕ್ಕೆ ಪೂರಕವಾಗಿ ರೈತರಿಂದು ತಮ್ಮ ಜಮೀನುಗಳಲ್ಲಿನ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಮಣ್ಣಿನ ಪರೀಕ್ಷೆ ಮಾಡಿಸುವುದರಿಂದ ಆ ಮಣ್ಣಿಗೆ ಅಗತ್ಯವಿರುವ ಪೋಷಕಾಂಶಗಳ ಪೂರೈಕೆ ಸಾಧ್ಯವಾಗಲಿದೆ. ಅಂತಹ ಅಗತ್ಯವಿರುವ ಅಂಶಗಳನ್ನು ನೀಡಿ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಸರಕಾರದ ವತಿಯಿಂದ ಮಣ್ಣಿನ ಪರೀಕ್ಷೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ‘ಸಾಯಿಲ್ ಹೆಲ್ತ ಕಾರ್ಡ್’ ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲ ರೈತರ ಎಲ್ಲ ಜಮೀನುಗಳಿಗೆ ಹೆಲ್ತ್ ಕಾರ್ಡ್ ನೀಡಲು ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದರು. ಕೃಷಿ ಅಭಿಯಾನವನ್ನು ಹೋಬಳಿ, ಗ್ರಾಮ ಪಂಚಾಯತ್ ಮಟ್ಟಕ್ಕೂ ವಿಸ್ತರಿಸುವ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ‘ಇಲಾಖೆಯ ನಡಿಗೆ ರೈತರ ಕಡೆಗೆ’ ಎಂಬ ಘೋಷಣೆೆಯನ್ನು ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆಗಳು ಒಟ್ಟಾಗಿ ರೈತರೆಡೆಗೆ ಸಾಗಿ ಕೃಷಿಕರ ಬದುಕನ್ನು ಹಸನುಗೊಳಿಸಬೇಕಾಗಿದೆ. ಕೃಷಿಭಾಗ್ಯ ಯೋಜನೆ ರೈತರಿಗೆ ವರದಾನವಾಗಿದ್ದು, ರೈತರು ಸ್ವಾಭಿಮಾನಿಗಳಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗಲಿದೆ ಎಂದರು. ಜಗಳೂರು ಕ್ಷೇತ್ರದ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ರೈತರು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳ ಬೆಳೆಯಲು ಹೆಚ್ಚು ಆಸಕ್ತಿವಹಿಸಬೇಕಾಗಿದೆ. ಈ ವರ್ಷವನ್ನು ಅಂತಾರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷವೆಂದು ಆಚರಿಸಲಾಗುತ್ತದೆ ಎಂದರು. ಹಾಗೂ ಉತ್ತಮ ಆರೋಗ್ಯಕ್ಕೆ ಪೂರಕವಾದ ಅವರೆ, ತೊಗರಿ, ಹೆಸರು, ಮುಂತಾದ ಅಕ್ಕಡಿ ಬೆಳೆಗಳನ್ನು ಬೆಳೆಯುವ ಮೂಲಕ ಮನುಷ್ಯರ ಹಾಗೂ ಮಣ್ಣಿನ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಶ್ರೀಮತಿ ಉಮಾ ಎಂ.ಪಿ ರಮೇಶ್, ಜಿ.ಪಂ ಸದಸ್ಯರಾದ ಎಸ್.ಕೆ ಮಂಜುನಾಥ್, ಉಮಾ ವೆಂಕಟೇಶ್, ತಾ.ಪಂ ಸದಸ್ಯರಾದ ಮಂಜುಳಾ, ಗ್ರಾ.ಪಂ ಅಧ್ಯಕ್ಷ ಬಸವರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ, ಸಹಾಯಕ ನಿರ್ದೇಶಕ ಸಿರಿಯಣ್ಣ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.