×
Ad

ಶಿವಮೊಗ್ಗ: ಇಂದಿನಿಂದ ಸಿಇಟಿ ಕೌನ್ಸೆಲಿಂಗ್

Update: 2016-06-02 22:21 IST

ಶಿವಮೊಗ್ಗ, ಜೂ. 2: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಸಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವೃತ್ತಿ ಶಿಕ್ಷಣ ಕಾಲೇಜುಗಳಿಗೆ ಆಯ್ಕೆ ಪ್ರಕ್ರಿಯೆ, ದಾಖಲಾತಿ ಪರಿಶೀಲನೆ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಜೂನ್ 3 ರಿಂದ 20ರವರೆಗೆ ನಡೆಯಲಿದೆ.

ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಕೃಷಿ ವಿಜ್ಞಾನ ಕಾಲೇಜುಗಳಿಗೆ ಸೇರಬಯಸುವ ಈಗಾಗಲೇ ಅರ್ಜಿ ಸಲ್ಲಿರುವ ಅಭ್ಯರ್ಥಿಗಳು ಜೂನ್ 3ರಿಂದ 20ರವರೆಗೆ ನಡೆಯುವ ದಾಖಲಾತಿ ಪರಿಶೀಲನೆಯಲ್ಲಿ ಪಾಲ್ಗೊಂಡು ತಮ್ಮ ಆಯ್ಕೆಯನ್ನು ದಾಖಲಿಸಿಕೊಳ್ಳಬಹುದಾಗಿದೆ.

ರಾಜ್ಯಾದ್ಯಂತ 15 ಕೇಂದ್ರಗಳಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ದಾಖಲಾತಿ ಪರಿಶೀಲನೆ ನಡೆಯಲಿದ್ದು, ಶಿವಮೊಗ್ಗದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಇನ್ನಿತರ ಸಮೀಪದ ಜಿಲ್ಲೆಗಳ ಅಭ್ಯರ್ಥಿಗಳ ಅನುಕೂಲಕ್ಕಾಗಿ ದಾಖಲಾತಿ ಪರಿಶೀಲನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಭಾಗದ ಅಭ್ಯರ್ಥಿಗಳು ಹಾಗೂ ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಛಾಯಾದೇವಿ ತಿಳಿಸಿದರು.

ಗುರುವಾರ ನಗರದ ಸಿಇಟಿ ಕೌನ್ಸೆಲಿಂಗ್ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸಿಇಟಿ ಪರೀಕ್ಷೆಯಲ್ಲಿ ಪಡೆದ ಉನ್ನತ ಶ್ರೇಣಿಯ ಹಿರಿತನ ಆಧಾರದ ಮೇಲೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳು ಹಾಗೂ ಒಂದು ಸೆಟ್ ಜೆರಾಕ್ಸ್ ದಾಖಲಾತಿಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿದ ಪ್ರತಿ ಹಾಗೂ 2 ಪಾಸ್ ಪೋರ್ಟ್ ಅಳತೆಯ ಫೋಟೊ ತರಬೇಕಿದೆ ಎಂದರು.

ಪ್ರತಿ ದಿನ ಬೆಳಗ್ಗೆ 9ಗಂಟೆಯಿಂದ ಆರಂಭವಾಗುವ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ನಾಲ್ಕು ಹಂತಗಳಲ್ಲಿ 5 ಕೌಂಟರ್‌ಗಳಲ್ಲಿ ನಡೆಯಲಿದೆ. ದೂರದಿಂದ ಆಗಮಿಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಎನ್‌ಇಎಸ್ ಶಿಕ್ಷಣ ಸಂಸ್ಥೆಯಿಂದ ಉಚಿತವಾಗಿ ಶಿವಮೊಗ್ಗ ನಗರದ ಮಹಾವೀರ ವೃತ್ತ ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಿಂದ ಜೆಎನ್‌ಎನ್‌ಸಿ ಕಾಲೇಜಿಗೆ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದರು.

ಸಿಇಟಿ ಕೌನ್ಸೆಲಿಂಗ್ ಕುರಿತು ಮಾಹಿತಿ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೋಡಲ್ ಅಧಿಕಾರಿ ನಾಗರಾಜ್, ಮೀಸಲಾತಿ ಬಯಸುವ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಸಲ್ಲಿಸಿರುವ ದಾಖಲೆಯ ಮೂಲ ಪ್ರತಿಯನ್ನೇ ತರಬೇಕು ಹಾಗೂ ಎಸ್ಸಿ, ಎಸ್ಟಿ ಪ್ರ ವರ್ಗ 1ರ ಅಭ್ಯರ್ಥಿಗಳಿಗೆ ಆದಾಯಮಿತಿ ಇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎನ್‌ಇಎಸ್ ಸಂಸ್ಥೆಯ ಕಾರ್ಯದರ್ಶಿ ಎಚ್.ಎಂ.ಮಲ್ಲಪ್ಪ, ಸಂಚಾಲಕ ಪ್ರವೀಣ್ ಮಹಿಷಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News