ಪಿಯು ಫಲಿತಾಂಶ ಕಡಿಮೆ ಬಂದಿದ್ದರ ಕಾರಣ ಹುಡುಕಲಿ: ಶಾಸಕ ದತ್ತ
ಕಡೂರು, ಜೂ.2: ಪಿಯು ಫಲಿತಾಂಶ ಕಡಿಮೆ ಬಂದಿದ್ದರ ಬಗ್ಗೆ ಸೂಕ್ತ ಕಾರಣ ಹುಡುಕಬೇಕಿದೆ. ಮುಂದಿನ ವರ್ಷಗಳಲ್ಲಿ ಈ ರೀತಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ ಖಾಲಿ ಇರುವ ಉಪನ್ಯಾಸಕರ ಹುದ್ದೆಯನ್ನು ಭರ್ತಿ ಮಾಡಲು 1ವಾರದಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ವೈಎಸ್‌ವಿ ದತ್ತ ತಿಳಿಸಿದ್ದಾರೆ.
ಅವರು ಪಿಯು ಕಾಲೇಜು ಕೊಠಡಿಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಲಬಸ್ ಬಗ್ಗೆ ಉಪನ್ಯಾಸಕರಲ್ಲಿ ಭಯ ಬರಲಿಲ್ಲ. ಅಲ್ಲದೇ ಈ ಸಾಲಿನಲ್ಲಿ ಸಿಲಬಸ್ ಪೂರ್ಣಗೊಳಿಸದೇ ಇದ್ದುದರಿಂದ ಫಲಿತಾಂಶ ಕಡಿಮೆ ಬಂದಿದ್ದು, ವಿದ್ಯಾರ್ಥಿಗಳಿಗೆ ವಿಶೇಷವಾದ ತರಬೇತಿಯನ್ನು ನೀಡಿರಲಿಲ್ಲ್ಲವೆಂಬ ಆಪಾದನೆ ಇದೆ ಎಂದರು. ಮುಂದಿನ ದಿನಗಳಲ್ಲಿ ಉಪನ್ಯಾಸಕರು ಮತ್ತು ಪೋಷಕರ ಸಭೆ ಕರೆಯಲಾಗುವುದು. ಪ್ರತಿ 3ತಿಂಗಳಿಗೊಮ್ಮೆ ಉಪನ್ಯಾಸಕರ ಸಭೆ ಕರೆದು ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು. ಪ್ರತೀ ಸಾಲಿನಲ್ಲಿ ಮಕ್ಕಳಿಂದ ಸುಮಾರು 7.50ಲಕ್ಷ ರೂ. ಬರುತ್ತದೆ. ಅತಿಥಿ ಉಪನ್ಯಾಸಕರ ಸಂಬಳಕ್ಕಾಗಿ 8.50 ಲಕ್ಷ ರೂ. ಖರ್ಚಾಗುತ್ತಿದೆ. ಪ್ರತಿ ವರ್ಷ 1.50ಲಕ್ಷ ರೂ. ನಷ್ಟ ಸಂಭವಿಸುತ್ತಿದೆ. ಈಗ ಮೂಲ ಬಂಡವಾಳ 11ಲಕ್ಷ ರೂ. ಬ್ಯಾಂಕಿನಲ್ಲಿದೆ. ಪ್ರಾಂಶುಪಾಲ ಜಯಣ್ಣ ಬಂದ ಹೊಸದರಲ್ಲಿ 20ಲಕ್ಷ ರೂ. ಬ್ಯಾಂಕಿನಲ್ಲಿ ಇದ್ದಿತ್ತು. ಇದರಲ್ಲಿ 4ಲಕ್ಷ ರೂ. ಕಾಮಗಾರಿಗೆ ನೀಡಲಾಗಿದೆ. ಅತಿಥಿ ಉಪನ್ಯಾಸಕರು 13ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ನೂತನವಾಗಿ ಶಾಲಾಭಿವೃದ್ಧಿ ಸಮಿತಿಗೆ ಭಂಡಾರಿ ಶ್ರೀನಿವಾಸ್ ಮತ್ತು ಪತ್ರಕರ್ತ ಎ.ಜೆ. ಪ್ರಕಾಶ್‌ಮೂರ್ತಿ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಲಾಭಿವೃದ್ಧಿ ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಕಾಲೇಜು ಉಪನ್ಯಾಸಕರಲ್ಲಿ ಹೊಂದಾಣಿಕೆಯ ಕೊರತೆ ಇದ್ದು, ಗುಂಪುಗಾರಿಕೆ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಕಾಲೇಜಿನಲ್ಲಿ ಶಿಸ್ತು ಎಂಬುದು ಇಲ್ಲದಾಗಿದೆ ಇದರ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದರು. ನಿವೃತ್ತ ಪ್ರಾಂಶುಪಾಲ ಎಲ್. ಪುಟ್ಟಕರಿಯಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಜಯಣ್ಣ, ಭಂಡಾರಿ ಶ್ರೀನಿವಾಸ್, ಕೋಡಿಹಳ್ಳಿ ಮಹೇಶ್, ಮಚ್ಚೇರಿ ಮಹೇಶ್, ಶಿವಕುಮಾರ್, ಉಪನ್ಯಾಸಕರಾದ ವೆಂಕಟೇಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.