ಕಟ್ಟುನಿಟ್ಟಿನ ಕ್ರಮದಿಂದ ಫಲಿತಾಂಶದಲ್ಲಿ ಕುಸಿತ
ಶಿಕಾರಿಪುರ, ಜೂ.2: ಪರೀಕ್ಷೆಯಲ್ಲಿ ಸಾಮೂಹಿಕ ನಕಲು ವಿಪರೀತವಾಗಿದ್ದು, ಕಟ್ಟುನಿಟ್ಟಿನ ಕ್ರಮದಿಂದಾಗಿ ಫಲಿತಾಂಶದಲ್ಲಿ ಕುಸಿತವಾಗುತ್ತಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ಮುಂದಿನ 2 ವರ್ಷದಲ್ಲಿ ಫಲಿತಾಂಶ ಶೇ. 50ಕ್ಕೆ ಕುಸಿಯಲಿದೆ ಎಂದು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆತಂಕ ವ್ಯಕ್ತಪಡಿಸಿದರು.
ಗುರುವಾರ ತಾಲೂಕಿನ ಸಾಲೂರು ಗ್ರಾಮದಲ್ಲಿನ ನೂತನ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಿರುದ್ಯೋಗದಿಂದ ಗ್ರಾಮದಿಂದ ವಲಸೆ ಹೋಗುವ ಪದ್ದತಿಯನ್ನು ತಡೆಗಟ್ಟುವ ಸಲುವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಯೋಜನೆಯ ಸದ್ಬಳಕೆ ಮೂಲಕ ಕಟ್ಟಡದ ಪ್ರಥಮ ಅಂತಸ್ತಿನಲ್ಲಿ ಸಾರ್ವಜನಿಕ ಸಭೆ ಆಯೋಜನೆಗೆ ವೇದಿಕೆ ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿ ವಿಸ್ತರಣೆಗೆ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ತಿಳಿಸಿದರು.
ಗ್ರಾಪಂಗಳಿಗೆ ಪರಮೋಚ್ಚ ಅಧಿಕಾರ ನೀಡಲಾಗಿದ್ದು, ಜಿಪಂ, ತಾಪಂ, ಶಾಸಕರು, ಸಚಿವರಿಗಿಲ್ಲದ ಅಧಿಕಾರದ ಸದ್ಬಳಕೆ ಮೂಲಕ ಗ್ರಾಮದಲ್ಲಿನ ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಸರಕಾರದ ಮನೆ ಮತ್ತಿತರ ಯೋಜನೆಗಳನ್ನು ತಲುಪಿಸುವ ಮೂಲಕ ಗ್ರಾಮಾಭಿವೃದ್ಧಿಗೆ ಹೆಚ್ಚಿನ ನಿಗಾವಹಿಸುವಂತೆ ತಿಳಿಸಿದ ಅವರು, ಉದ್ಯೋಗ ಖಾತ್ರಿ ಮೂಲಕ ಪ್ರತಿ ಗ್ರಾಮದಲ್ಲಿ ಆಸ್ತಿ, ಸ್ವತ್ತುಗಳ ನಿರ್ಮಾಣವಾಗಬೇಕಾಗಿದೆ ಎಂದರು.
ನೈತಿಕತೆಯ ಶಿಕ್ಷಣ ಇಂದಿನ ತುರ್ತು ಅನಿವಾರ್ಯವಾಗಿದ್ದು, ಶಾಲಾ ಮಕ್ಕಳಿಗೆ ಶೂ ವಿತರಿಸುವ ಯೋಜನೆಯನ್ನು ಪ್ರಾಮಾಣಿಕವಾಗಿ ಮಕ್ಕಳಿಗೆ ತಲುಪಿಸಲು ಶಾಲಾಭಿವೃದ್ಧಿ ಸಮಿತಿಗೆ ನೇರವಾಗಿ ಜನತೆಯ ತೆರಿಗೆ ಹಣದ ಅನುದಾನವನ್ನು ನೀಡಲಾಗಿದ್ದು ಪೋಷಕರಿರುವ ಸಮಿತಿಯಲ್ಲಿ ಅವ್ಯವಹಾರದ ವಾಸನೆ ವಿಪರೀತವಾಗಿದೆ ಎಂದರು. ನೈತಿಕ ಶಿಕ್ಷಣದ ಕೊರತೆಯಿಂದಾಗಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಹೆಚ್ಚಾಗಿದೆ. ಇದನ್ನು ಸರಿಪಡಿಸಲು ಸರ್ವರೂ ಶ್ರಮಿಸಬೇಕಾಗಿದೆ. ಗಾಂಧೀಜಿ, ಸ್ವಾಮಿ ವಿವೇಕಾನಂದರು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗದೆ ಅನ್ಯಾಯ, ಅಕ್ರಮಗಳನ್ನು ಖಂಡಿಸಿ, ನಾಡಿನ ಅಖಂಡತೆಗೆ ಧಕ್ಕೆ ತರುವ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ವರ್ತಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲಿದೆ ಎಂದರು.
ಕಾರ್ಯಕ್ರಮವನ್ನು ಶಾಸಕ ರಾಘವೇಂದ್ರ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಕನಸು ನನಸಾಗಿಸಲು ಗ್ರಾಮ ರಾಜ್ಯದ ಕಲ್ಪನೆಗೆ ಪೂರಕವಾಗಿ ಜಿಪಂ, ತಾಪಂ, ಗ್ರಾಪಂ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಗ್ರಾಪಂಗಳಿಗೆ ವಾರ್ಷಿಕ 70-80 ಲಕ್ಷ ರೂ. ಅನುದಾನವಿದೆ. ಶಾಸಕರ ಅನುದಾನಕ್ಕಿಂತ ಹೆಚ್ಚಿರುವ ಅನುದಾನದ ಸದ್ಬಳಕೆಗೆ ಸೂಚಿಸಿದ ಅವರು ತಾಲೂಕಿನ ಶಾಲಾ ಕಾಲೇಜುಗಳಿಗೆ, ರಸ್ತೆ ಮತ್ತಿತರ ಕಾಮಗಾರಿಗೆ ಸಚಿವರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಪ್ರಶಂಸಿಸಿದರು.
ಸಂಸದ ಯಡಿಯೂರಪ್ಪನವರು ತಾಲೂಕಿನ ಮೂಲಕ ಹಾದು ಹೋಗಲಿರುವ 3 ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮೂಲಕ ಮಂಜೂರಾತಿಗೊಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯಕ್ಕೆ ಸೇತುವೆಯಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧ್ದಿಗೆ ಹೆಚ್ಚಿನ ನಿಗಾವಹಿಸಿರುವುದಾಗಿ ಅವರು ತಿಳಿಸಿದರು.
ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಮಹಿಳಾ ಸದಸ್ಯರು ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವರಿಗೆ ಮನವಿ ಸಲ್ಲಿಸಿದರು. ಇದೇ ಸಂದರ್ಭ ಗಣ್ಯರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಕೇಶವ ವಹಿಸಿದ್ದರು.
ವೇದಿಕೆಯಲ್ಲಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ, ಎಂಎಲ್ಸಿ ಪ್ರಸನ್ನಕುಮಾರ್, ಜಿಪಂ ಸದಸ್ಯೆ ಆರುಂಧತಿ, ತಾಪಂ ಅಧ್ಯಕ್ಷ ಪರಮೇಶ್ವರಪ್ಪ, ಉಪಾಧ್ಯಕ್ಷೆ ರೂಪಾ, ಸದಸ್ಯ ಮಲ್ಲಿಕಾರ್ಜುನ ರೆಡ್ಡಿ, ಶಾಂತಕುಮಾರಿ, ಇಒ ಲೋಹಿತ್, ವೈದ್ಯ ಡಾ. ಚಂದ್ರಪ್ಪ, ಮುಖಂಡ ಗೋಣಿ ಮಾಲತೇಶ, ಕೆ.ಸಿ. ಬಸವರಾಜ, ಪಿಡಿಒ ಶಿವಕುಮಾರ್ ಮತ್ತಿತರರು ಉಪಸ್ಥಿತ ರಿದ್ದರು.