ಪೊಲೀಸರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ
ಸಾಗರ, ಜೂ.3: ವೇತನ ತಾರತಮ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಟಿಪ್ಪುಸುಲ್ತಾನ್ ಸಹಾರ ನವಜವಾನ್ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸೈಯದ್ ಜಮೀಲ್, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪೊಲೀಸ್ ವ್ಯವಸ್ಥೆ ಇರದ ಸಮಾಜವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಪೊಲೀಸ್ ಸಿಬ್ಬಂದಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಭಟನೆಯಂತಹ ಹಾದಿ ತುಳಿಯುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಪೊಲೀಸರ ವೇತನಕ್ಕೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ವೇತನ ತೀರ ಕಡಿಮೆ ಇದೆ. ಇಲಾಖೆಯ ಕೆಳಮಟ್ಟದ ಸಿಬ್ಬಂದಿಯನ್ನು ಅತ್ಯಂತ ಹೀನಾಯ ಸ್ಥಿತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಸರಕಾರ ಪೊಲೀಸ್ ಸಿಬ್ಬಂದಿಯ ಜೀವನಮಟ್ಟ ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ವರ್ಷದ 365ದಿನಗಳೂ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ವೇತನ ಹಾಗೂ ಭತ್ತೆಯನ್ನು ಹೆಚ್ಚಿಸಬೇಕು. ಕಾಲಕಾಲಕ್ಕೆ ಸಿಬ್ಬಂದಿಗೆ ರಜೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಬೇಕು. ಪೊಲೀಸರು ಮುಂದಿಟ್ಟಿರುವ ಎಲ್ಲ ಬೇಡಿಕೆ ಗಳನ್ನು ಈಡೇರಿಸುವ ಮೂಲಕ ಅವರ ಹಿತಕಾಯುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಗಫೂರ್ ಸಾಬ್, ನಗರ ಘಟಕದ ಅಧ್ಯಕ್ಷ ಸೈಯದ್ ಝಾಕೀರ್, ಕಾರ್ಯದರ್ಶಿ ಶಬ್ಬೀರ್ ಖಾನ್, ಉಪಾಧ್ಯಕ್ಷ ನೂರುಲ್ಲಾ, ಪ್ರಮುಖರಾದ ಗೌಸ್, ಸಮದ್, ಅಸ್ಲಾಂ, ಸೈಯದ್ ಉಮರ್, ಇಮ್ತಿಯಾಝ್, ಅಕ್ಬರ್ ಮತ್ತಿತರರು ಹಾಜರಿದ್ದರು