×
Ad

ರಸಗೊಬ್ಬರ ಪೂರೈಕೆಗೆ ಇಲಾಖೆ ಶೀಘ್ರ ಗಮನಹರಿಸಲಿ:

Update: 2016-06-03 22:19 IST

ಸಾಗರ, ಜೂ.3: ಮುಂಗಾರು ಪ್ರಾರಂಭವಾಗುತ್ತಿದ್ದು, ಬಿತ್ತನೆಬೀಜ ಹಾಗೂ ರಸಗೊಬ್ಬರ ಪೂರೈಕೆ ನಿಟ್ಟಿನಲ್ಲಿ ಕೃಷಿ ಇಲಾಖೆಯವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪಸೂಚನೆ ನೀಡಿದ್ದಾರೆ. ಇಲ್ಲಿನ ತಾಲೂಕು ಪಂಚಾಯತ್‌ನ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದರು.

ಕೃಷಿ ಯಂತ್ರೋಪಕರಣಗಳನ್ನು ಪಡೆದ ಫಲಾನುಭವಿಗಳು ಅದನ್ನು ಸಮರ್ಪಕವಾಗಿ ಉಪಯೋಗಿಸುತ್ತಿದ್ದಾರೆಯೇ? ಎಂಬುದರ ಬಗ್ಗೆ ಅಧಿಕಾರಿಗಳು ಕಾಲಕಾಲಕ್ಕೆ ಗಮನ ಹರಿಸುತ್ತಿರ ಬೇಕು ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾಕುಮಾರಿ ಮಾತನಾಡಿ, ಗೊಬ್ಬರದ ಅಂಗಡಿಗಳಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಯಾವ ಅಂಗಡಿಗಳ ಎದುರು ಗೊಬ್ಬರದ ಬೆಲೆ ರೈತರಿಗೆ ತೋರುವಂತೆ ನಾಮಫಲಕದಲ್ಲಿ ಹಾಕುತ್ತಿಲ್ಲ. ರೈತರು ಹೆಚ್ಚಿನ ಹಣ ಕೊಟ್ಟು ಗೊಬ್ಬರ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ ಕಾಗೋಡು, ತಾಲೂಕಿನಲ್ಲಿ ಇರುವ ಖಾಸಗಿ ರಸಗೊಬ್ಬರ ಅಂಗಡಿಗಳಿಗೆ ಜಿಲ್ಲಾ, ತಾಲೂಕು ಪಂಚಾಯತ್ ಅಧ್ಯಕ್ಷರು, ಸದಸ್ಯರನ್ನೊಳಗೊಂಡಂತೆ ಕೃಷಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರಬೇಕು. ರೈತರನ್ನು ಶೋಷಣೆ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹ ಅಂಗಡಿ ಮಾಲಕರ ವಿರುದ್ಧ ಕ್ರಮ ಜರಗಿಸುವಂತೆ ಸೂಚನೆ ನೀಡಿದರು. ಇನ್ನೋರ್ವ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ಬಿತ್ತನೆಬೀಜವನ್ನು ಕೆಲವರು ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ತಂದು ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ ವಂಚನೆಯಾಗುತ್ತಿದೆ. ಇಂತಹವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಭಾಧ್ಯಕ್ಷರ ಗಮನಕ್ಕೆ ತಂದರು. ಬಿತ್ತನೆಬೀಜವನ್ನು ಕೊಡುವಾಗ ಅವರು ನಿಜವಾದ ಕೃಷಿಕರೇ, ಅವರು ಹೊಂದಿರುವ ಜಮೀನು ಎಷ್ಟು, ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಏಕೆ ಖರೀದಿ ಮಾಡುತ್ತಿದ್ದಾರೆ ಎನ್ನುವ ಕುರಿತು ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಹೆಚ್ಚಿನದರಕ್ಕೆ ಮಾರಾಟ ಮಾಡಲು ಬಿತ್ತನೆಬೀಜ ಖರೀದಿ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳಬೇಕು ಎಂದು ಕಾಗೋಡು ಆದೇಶ ಮಾಡಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕಡ್ಡಾಯ ಶಿಕ್ಷಣ ನೀತಿಯಿಂದಾಗಿ ಸರಕಾರಿ ಶಾಲೆಗಳು ಸಂಕಷ್ಟ ಎದುರಿಸುವಂತಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಕಡ್ಡಾಯ ಶಿಕ್ಷಣ ನೀತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಸರಕಾರ ಪ್ರತಿವರ್ಷ ಸುಮಾರು 300 ಕೋಟಿ ರೂ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳ ದಾಖಲಾತಿಗೆ ನೀಡುತ್ತಿದೆ. ಅದರ ಬದಲು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ನೀತಿ ಜೊತೆಗೆ ಏಕರೂಪ ಶಿಕ್ಷಣ ನೀತಿ ತರುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ಕಡ್ಡಾಯ ಶಿಕ್ಷಣ ಕಾಯ್ದೆಯಲ್ಲಿ ಒಂದಷ್ಟು ತಿದ್ದುಪಡಿಗಳು ಅಗತ್ಯವಾಗಿದೆ. ಜೊತೆಗೆ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಸೇರಿದಂತೆ ಗುಣಮಟ್ಟ ಹೆಚ್ಚಿಸುವ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದು ಕಾಗೋಡು ತಿಮ್ಮಪ್ಪಹೇಳಿದರು.

 ಸಭೆಯಲ್ಲಿ ವೈದ್ಯರ ಸಮಸ್ಯೆ, ಶಾಲಾ ಕಟ್ಟಡ, ಅಕ್ಷರ ದಾಸೋಹ ಕೊಠಡಿ ದುರಸ್ತಿ ವಿಷಯ ಕುರಿತು ಚರ್ಚೆ ನಡೆಯಿತು. ಕೆಲವು ಶಿಕ್ಷಕರನ್ನು ಡೆಪ್ಯೂಟೇಷನ್ ಮಾಡುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಕಾಗೋಡು, ಶಿಕ್ಷಕರ ಸುಖಕ್ಕಾಗಿ ಶಾಲೆ ಅಲ್ಲ. ಮಕ್ಕಳ ಸುಖಕ್ಕಾಗಿ ಶಾಲೆ ಇರುವುದು. ಅನಗತ್ಯ ಡೆಪ್ಯೂಟೇಶನ್ ಮಾಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಪರಶುರಾಮ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಿದ್ದಲಿಂಗಯ್ಯ, ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News