×
Ad

ಅರಣ್ಯ ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮಕ್ಕೆ ಆಗ್ರಹ

Update: 2016-06-03 22:20 IST

ಶಿವಮೊಗ್ಗ, ಜೂ. 3: ಪಶ್ಚಿಮ ಘಟ್ಟ ಅರಣ್ಯ ಸಂಪತ್ತು ರಕ್ಷಣೆಗೆ ವಿಶೇಷ ಕಾರ್ಯಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ವೃಕ್ಷಲಕ್ಷ ಆಂದೋಲನ ಸಂಸ್ಥೆಯು ಶುಕ್ರವಾರ ನಗರದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯ ಮೂಲಕ ಅರಣ್ಯ-ಪರಿಸರ ಇಲಾಖೆ ಖಾತೆ ಸಚಿವ ರಮಾನಾಥ ರೈರವರಿಗೆ ಮನವಿ ಪತ್ರ ಸಲ್ಲಿಸಿತು. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಜಲಕ್ಷಾಮ ತಲೆದೋರಿದೆ. ಇದಕ್ಕೆ ಅರಣ್ಯ ನಾಶ ಹಾಗೂ ಪಶ್ಚಿಮಘಟ್ಟದ ಹಸಿರು ಕಣಿವೆಗಳು ನಾಶವಾಗಿರುವುದೆ ಕಾರಣವೆಂಬುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಳಿದುಳಿದಿರುವ ವನ ಸಂಪತ್ತು ಸಂರಕ್ಷಣೆಗೆ ಸರಕಾರ ವಿಶೇಷ ಒತ್ತು ನೀಡಬೇಕು. ಕೆರೆ, ಹಳ್ಳ, ನದಿ, ಕಣಿವೆಗಳ ಒತ್ತುವರಿ ತಡೆಗೆ ಸ್ಪಷ್ಟ ಕಾರ್ಯ ಯೋಜನೆ ರೂಪಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಕಳೆದ 6 ವರ್ಷಗಳಿಂದ ಸತತ ಜಂಟಿ ಪ್ರಯತ್ನ ನಡೆಸಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾನು ಅರಣ್ಯ ಸಂರಕ್ಷಣೆ ಭಾಗಶಃ ಸಾಧ್ಯವಾಗಿದೆ. ರೈತರು, ಗ್ರಾಮ ಅರಣ್ಯ ಸಮಿತಿ, ಸಂಶೋಧಕರು, ವೃಕ್ಷ ಲಕ್ಷ ಪರಿಸರ ಕಾರ್ಯಕರ್ತರು, ಅರಣ್ಯ ಇಲಾಖೆ ಜೊತೆ ಒಗ್ಗೂಡಿ 25,000 ಎಕರೆ ಕಾನು ಅರಣ್ಯ ಉಳಿಸಿದ್ದಾರೆ. ಇಂತಹ ಯಶಸ್ವಿ ಪ್ರಯೋಗಗಳನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಿಸಬೇಕು. ಕಾನು ಅರಣ್ಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಂಘಟನೆ ಆಗ್ರಹಿಸಿದೆ. ಮಳೆಗಾಲದ ಜೂನ್-ಜುಲೈನಲ್ಲಿ ರೈತರು, ವನವಾಸಿಗಳು, ನಗರವಾಸಿಗಳು ತಮ್ಮ ಹಿತ್ತಲಲ್ಲಿ ಹಣ್ಣಿನ ಸಸಿ ನೆಡಲು ವ್ಯಾಪಕ ವೃಕ್ಷಾರೋಹಣ ಅಭಿಯಾನವನ್ನು ಸರಕಾರವೇ ಮುಂದಾಗಿ ನಡೆಸಬೇಕು. ಪ್ರಸ್ತುತ ಸಾಮಾಜಿಕ ಅರಣ್ಯ ವಿಭಾಗಕ್ಕೆ ಕೆಲಸವೇ ಇಲ್ಲದ ಪರಿಸ್ಥಿತಿಯಿದೆ. ಶೇ. 18 ರಷ್ಟು ಆದಾಯವನ್ನು ಪಂಚಾಯತ್ ರಾಜ್ ಸಂಸ್ಥೆಗಳು ಅರಣ್ಯ ಅಭಿವೃದ್ಧಿಗೆ ವೆಚ್ಚ ಮಾಡಬೇಕೆಂಬ ಆದೇಶ ಮೂಲೆಗೆ ಬಿದ್ದಿದೆ ಎಂದು ಸಂಘಟನೆ ಆರೋಪಿಸಿದೆ. ರಾಜ್ಯದಲ್ಲಿ 5,000 ಗ್ರಾಮ ಅರಣ್ಯ ಸಮಿತಿಗಳು 10,000 ಪಂಚಾಯತ್ ಜೀವ ವೈವಿಧ್ಯ ಸಮಿತಿಗಳು ಹೆಸರಿಗೆ ಮಾತ್ರ ಇವೆ. ಇವುಗಳನ್ನು ಸಕ್ರಿಯಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಅರಣ್ಯ ಇಲಾಖೆಯು ವಿದೇಶಿ ನೆರವಿನೊಂದಿಗೆ ಆರಂಭಿಸಿರುವ ‘ರೆಡ್ ಪ್ಲಸ್’ ಎಂಬ ಜನ ಸಹಭಾಗಿತ್ವದ ಅರಣ್ಯ ಅಭಿವೃದ್ಧಿಯ ಫಲಶ್ರುತಿ ಏನೆಂಬುವುದರ ಮಾಹಿತಿಯನ್ನು ನಾಗರಿಕರಿಗೆ ತಿಳಿಸಬೇಕು. ಜೀವವೈವಿಧ್ಯತೆಗೆ ಧಕ್ಕೆ ತರುತ್ತದೆ ಎಂಬ ಹಿನ್ನೆಲೆಯಲ್ಲಿ ಅಕೇಶಿಯಾದಂಥ ಏಕಜಾತಿ ನೆಡುತೋಪು ಪಶ್ಚಿಮ ಘಟ್ಟದಲ್ಲಿ ಬೆಳೆಯುವುದು ಬೇಡವೆಂಬ ನಿರ್ಧಾರವನ್ನು ಸರಕಾರವೇ ಈ ಹಿಂದೆ ಆದೇಶ ಹೊರಡಿಸಿತ್ತು. ಆದರೆ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಅಕೇಶಿಯಾ ಗಿಡಗಳೇ ಎದ್ದು ಕಾಣುತ್ತಿರುವುದು ಏಕೆ ಎಂದು ಸಂಘಟನೆ ಪ್ರಶ್ನಿಸಿದೆ. ಡೀಮ್ಡ್ ಅರಣ್ಯ ವ್ಯಾಪ್ತಿಯನ್ನು ಕಡಿಮೆ ಮಾಡಬಾರದು. ಸ್ಥಾಪಿತ ಹಿತಾಸಕ್ತಿಗಳ ಒತ್ತಡಕ್ಕೆ ಸರಕಾರ ಮಣಿಯಬಾರದು. ಕರಾವಳಿಯ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆಯಿಂದ 50,000 ಮರಗಳ ನಾಶವಾಗಿದೆ. ಇಲ್ಲಿ ರಸ್ತೆ ಬದಿ ಸಾಲು ಮರ ಬೆಳೆಸುವ ಯೋಜನೆ ನನೆಗುದಿಗೆ ಬಿದ್ದಿದೆ. ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಶಿವಮೊಗ್ಗ ತಾಲೂಕಿನ ಕುಂಸಿಯಿಂದ ಹೊನ್ನಾವರದವರೆಗಿನ ಪಶ್ಚಿಮಘಟ್ಟದ ಶರಾವತಿ ನದಿ ಕಣಿವೆಯ ದಟ್ಟಾರಣ್ಯ ಬಲಿ ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಸಮುದ್ರ ಕೊರೆತ ತಡೆಗೆ ಮಂಗಳೂರು ಸಮೀಪ ಸಾವಿರ ಕೋಟಿ ರೂ.ಗಳ ಉಳ್ಳಾಲ ಎಡಿಬಿ ಯೋಜನೆ ಅರ್ಧ ಜಾರಿ ಆಗಿದೆ. ಇದು ವ್ಯರ್ಥಯೋಜನೆ ಆಗಬಾರದು. ಕರಾವಳಿ ಹಸಿರು ಕವಚ ನಿರ್ಮಾಣ ಕಾರ್ಯಕ್ರಮವನ್ನು ಉಳ್ಳಾಲ ಯೋಜನೆಗೆ ಅಳವಡಿಸಿಕೊಳ್ಳಬೇಕು. ಸಮುದ್ರದ ಅಂಚಿಗೆ ಗಿಡ ಬೆಳೆಸಬೇಕು ಎಂದು ಸಂಘಟನೆ ತಿಳಿಸಿದೆ.

ಮನವಿ ಸಲ್ಲಿಸುವ ವೇಳೆ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮುಖಂಡರಾದ ಪ್ರೋ.ಎಂ. ಕುಮಾರಸ್ವಾಮಿ, ರವಿಹನಿಯ, ಬಿ.ಎಚ್. ರಾಘವೇಂದ್ರ, ಆನೇಗುಳಿ ಸುಬ್ಬರಾವ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News