×
Ad

ಕಾಂಗ್ರೆಸ್‌ನಿಂದ ಕೃಷಿ, ಕುಡಿಯುವ ನೀರಿಗೆ ಆದ್ಯತೆ: ಸಿದ್ದರಾಮಯ್ಯ

Update: 2016-06-03 22:22 IST

ಚಿಕ್ಕಮಗಳೂರು, ಜೂ.3: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬಂದಾಗಿನಿಂದಲೂ ಈವರೆಗೆ ರೈತರಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಆದ್ಯತೆ ನೀಡಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ ಬಜೆಟ್‌ನಲ್ಲಿ 10ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅವರು ಶುಕ್ರವಾರ ನರಸಿಂಹರಾಜಪುರದ ಟಿ.ಬಿ.ಸರ್ಕಲ್‌ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ನಡೆದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ, ಸರಕಾರ ಈಗಾಗಲೆ 3ವರ್ಷ ಪೂರೈಸಿದ್ದು, ನಾಲ್ಕನೆ ವರ್ಷದಲ್ಲಿದ್ದೇವೆ. ಜನರ ಆಶೋತ್ತರಗಳಿಗೆ ಉತ್ತಮವಾಗಿ ಸ್ಪಂದಿಸಿದ್ದೇವೆ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತೇನೆ. ನಮ್ಮ ಸರಕಾರ ಬರುವ ಮುಂಚೆ 165 ಭರವಸೆಗಳನ್ನು ನೀಡಿದ್ದೆವು ಅದರಲ್ಲಿ 135ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹಾಗೂ ನೀರಾವರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಸರಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲು ಮುಂದಾಗಿದೆ, ಮುಂದಿನ ಎರಡು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

 ರಾಜ್ಯದಲ್ಲಿ ಕಳೆದ 44 ವರ್ಷಗಳ ಹಿಂದೆ ಬಂದಂತಹ ಬೀಕರ ಬರಗಾಲ ಈಗ ಎದ್ದುರಾಗಿದ್ದು, ಕಳೆದ ಸಾಲಿನಲ್ಲಿ ಮುಂಗಾರಿಲ್ಲಿ 137 ತಾಲೂಕುಗಳನ್ನು ಹಾಗೂ ಹಿಂಗಾರಿನಲ್ಲಿ 62 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ದೇಶದಲ್ಲಿ ರಾಜಸ್ತಾನ ರಾಜ್ಯವನ್ನು ಬಿಟ್ಟರೆ ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಒಣ ಭೂಮಿ ಪ್ರದೇಶ ಹೊಂದಿದೆ. ಮುಂಗಾರಿನಲ್ಲಿ 16 ಸಾವಿರ ಕೋಟಿ ರೂ. ಹಾಗೂ ಹಿಂಗಾರಿನಲ್ಲಿ 700 ಕೋಟಿ ರೂ. ಬೆಳೆ ನಷ್ಠವಾಗಿದೆ. ಕೇಂದ್ರ ಸರಕಾರ ಮುಂಗಾರಿನಲ್ಲಿ 1,450ಕೋಟಿ ರೂ. ಹಾಗೂ ಹಿಂಗಾರಿನಲ್ಲಿ 725ಕೋಟಿ ರೂ. ಪರಿಹಾರ ನೀಡಿದೆ. ಈಗಾಗಲೇ ಇದನ್ನು ಖರ್ಚು ಮಾಡಲಾಗಿದೆ. ಇದಲ್ಲದೆ ಕೇಂದ್ರ ಸರಕಾರಕ್ಕೆ 1,600ಕೋಟಿ ರೂ. ನೀಡಬೇಕೆಂದು ಪ್ರಧಾನ ಮಂತ್ರಿಗಳ ಸಭೆಯಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಯಾರಿಗೂ ನೀರಿನ ಸಮಸ್ಯೆ ಆಗದಂತೆ ರಾಜ್ಯದಲ್ಲಿ 1,400ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ. ಸರಕಾರದಿಂದ ಅಗತ್ಯ ಅನುದಾನ ನೀಡುವುದರೊಂದಿಗೆ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News