ರಾಜ್ಯ ಸರಕಾರ ವೇತನ ತಾರತಮ್ಯ ನಿವಾರಿಸಲಿ: ಮಂಜುನಾಥ್
ಕಡೂರು, ಜೂ.3: ಕಡೂರು ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ವೇತನ ತಾರತಮ್ಯ ನಿವಾರಣೆಗೆ ಸುಮಾರು ಐದು ಸಾವಿರ ಕೋಟಿ ರೂ. ಸರಕಾರ ಭರಿಸಬೇಕಿದ್ದು, ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ರಾಜ್ಯ ಸರಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ರಾಜ್ಯ ಸರಕಾರ ನೌಕರರ ಸಂಘದ ಅಧ್ಯಕ್ಷ ಎನ್.ಬಿ.ಮಂಜುನಾಥ್ ತಿಳಿಸಿದ್ದಾರೆ.
ಅವರು ರಾಜ್ಯ ಸರಕಾರಿ ನೌಕರರ ವೇತನ ತಾರತಮ್ಯ ನಿವಾರಣೆಗಾಗಿ ಒಂದು ದಿನದ ಸಾಂಕೇತಿಕ ಮುಷ್ಕರದ ನೇತೃತ್ವವ ವಹಿಸಿ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು 1.43ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದು, 6.50ಲಕ್ಷ ನೌಕರರಿಗೆ 5,000ಕೋಟಿ ರೂ. ವಾರ್ಷಿಕವಾಗಿ ನೀಡಿದರೆ ರಾಜ್ಯ ಸರಕಾರಿ ನೌಕರರ ವೇತನ ತಾರತಮ್ಯ ನಿವಾರಣೆಯಾಗಲಿದೆ. ಸುಮಾರು 1.50ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಕೆಲಸವನ್ನು ಹೆಚ್ಚುವರಿಯಾಗಿ ನೌಕರರೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಸರಕಾರಕ್ಕೆ 9000 ಕೋಟಿ ರೂ. ಉಳಿತಾಯವಾಗುತ್ತಿದೆ ಎಂದರು. ರಾಜ್ಯ ಸರಕಾರವು ವೇತನ ತಾರತಮ್ಯ ನಿವಾರಣೆಗೆ ಮುಷ್ಕರದ ಮೂಲಕ ಬೇಡಿಕೆ ಈಡೇರಿಸಿಕೊಳ್ಳುತ್ತಿರುವುದು ದುರ್ದೈವವಾಗಿದೆ. ಮುಂದಿನ ನಿರ್ಧಾರಗಳಿಗೆ ನೌಕರರು ಬದ್ಧರಾಗಿರಬೇಕಿದೆ. ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಶಾಂತಿಯುತ ಮುಷ್ಕರಕ್ಕೆ ಸಹಕರಿಸಿದ ಪೊಲೀಸ್ ಇಲಾಖೆಗೆ ಅಭಿನಂದಿಸುವುದರೊಂದಿಗೆ ಇದೇ ಜೂ. 4ರಂದು ನಡೆಯಲಿರುವ ಪೊಲೀಸರ ಮುಷ್ಕರಕ್ಕೆ ರಾಜ್ಯ ಸರಕಾರಿ ನೌಕರರ ತಾಲೂಕು ಘಟಕ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎ.ಲಕ್ಷ್ಮಣ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಪುಟ್ಟಪ್ಪ ಮಾತನಾಡಿದರು. ಪ್ರಾರಂಭದಲ್ಲಿ ತಹಶೀಲ್ದಾರ್ ಕಚೇರಿ ಮುಂಬಾಗ ಸಾವಿರಾರು ಸಂಖ್ಯೆಯಲ್ಲಿ ಮುಷ್ಕರ ನಿರತರಾಗಿ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೊನೆಯಲ್ಲಿ ತಹಶೀಲ್ದಾರ್‌ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮುಷ್ಕರಕ್ಕೆ ಬೆಂಬಲ ನೀಡಿ ಎಲ್ಲ ಸರಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮುಚ್ಚಿದ್ದವು. ನ್ಯಾಯಾಲಯದ ನೌಕರರೂ ಸಹ ಮುಷ್ಕರದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪ ನಡೆಯಲಿಲ್ಲ.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದಮೂರ್ತಿ, ಬೀರೂರು ವಲಯದ ಅಧ್ಯಕ್ಷ ಅಜ್ಜಯ್ಯ, ಎಚ್.ಸಿ.ರೇವಣಸಿದ್ಧಪ್ಪ, ವೈ.ಟಿ.ಚಂದ್ರಪ್ಪ, ಲವಕುಮಾರ್, ಪಿಡಿಒ ಚಂದ್ರಪ್ಪ, ತವರಾಜ್, ಗುರುರಾಜ್ ಹಾಲ್ಮಠ್ ಮತ್ತಿತರರು ಉಪಸ್ಥಿತರಿದ್ದರು.