ಎಂಎಸ್‌ಐಎಲ್ ಮದ್ಯದಂಗಡಿ ಸ್ಥಳಾಂತರಕ್ಕೆ ಸಿಪಿಐ ಒತ್ತಾಯ
ಚಿಕ್ಕಮಗಳೂರು, ಜೂ.3: ತಾಲೂಕಿನ ಆವತಿ ಗ್ರಾಮದಲ್ಲಿ ಎಂಎಸ್‌ಐಎಲ್ ಕಂಪೆನಿಯ ಮದ್ಯದಂಗಡಿ ಗಳನ್ನು ತೆರೆಯಲಾಗಿದ್ದು, ಈ ಅಂಗಡಿಗಳನ್ನು ಕೂಡಲೇ ಗ್ರಾಮದಿಂದ ಸ್ಥಳಾಂತರಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸು ವುದಾಗಿ ಸಿಪಿಐ ತಾಲೂಕು ಕಾರ್ಯದರ್ಶಿ ಕಾಂ.ಆವತಿ ವೆಂಕಟೇಶ್ ಹೇಳಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಈ ಮದ್ಯದಂಗಡಿಯಿಂದ ಸುತ್ತಮುತ್ತಲಿನ ಹಳ್ಳಿಯ ವಾತಾವರಣ ಕಲುಷಿತಗೊಂಡು ಮಾನಸಿಕ ಕಿರುಕುಳ, ಜಗಳದಿಂದಾಗಿ ಗ್ರಾಮ ತತ್ತರಿಸಿ ಹೋಗಿದೆ. ಅಲ್ಲದೇ ಪಕ್ಕದಲ್ಲಿಯೇ ಹೈಸ್ಕೂಲ್ ಇದ್ದು, ಪ್ರತಿದಿನ ಶಾಲಾ ಮಕ್ಕಳು, ಶಿಕ್ಷಕರಿಗೆ ಬ್ರಾಂಡಿ ಅಂಗಡಿಯಿಂದ ತರಗತಿಗಳಿಗೆ ಅಡ್ಡಿಯುಂಟಾಗುತ್ತಿದೆ. ಅಲ್ಲದೇ ಪ್ರತಿನಿತ್ಯ ಶಾಲಾ ಮಕ್ಕಳು ಕುಡುಕರ ಎಸೆದ ಮದ್ಯ ಬಾಟಲಿ, ಪೇಪರ್, ಲೋಟಗಳನ್ನು ಶಾಲೆಯ ಮೈದಾನದಿಂದ ಸ್ವಚ್ಛ ಮಾಡುವಂತಾಗಿದೆ ಎಂದಿದ್ದಾರೆ.
ಮದ್ಯದಂಗಡಿಯು ಸರಕಾರದ ನಿಯಮದಂತೆ ಶಾಲಾ ಕಾಲೇಜು, ದೇವಸ್ಥಾನ, ಪರಿಶಿಷ್ಟ ಜನರು ವಾಸಿಸುವ ಸ್ಥಳದಿಂದ 100ಮೀ, ಅಂತರದಲ್ಲಿರಬೇಕು ಎಂಬ ಕಾನೂನಿಗೆ ವಿರುದ್ಧವಾಗಿ ಹಾಗೂ ದಲಿತರು ವಾಸಿಸುವ ಮನೆಯ ಹತ್ತಿರವೇ ತೆರೆದಿದ್ದು, ಇದರಿಂದಾಗಿ ಸುತ್ತಮುತ್ತಲಿನ ಹಲವಾರು ಹಳ್ಳಿಯ ದಲಿತ ಯುವಕರು ಕುಡಿತದ ಚಟಕ್ಕೆ ಬಲಿಯಾಗಿ, ಕೆಲವರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಈ ಅಂಗಡಿಯ ಸಮೀಪವೇ ಗ್ರಾಪಂ ಕಾರ್ಯಾಲಯ, ಕೃಷಿ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಬ್ಯಾಂಕ್, ಬಸ್‌ನಿಲ್ದಾಣ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ, ನಾಡ ಕಚೇರಿ ಇರುವುದರಿಂದ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಅಂಗಡಿಯನ್ನು ಸ್ಥಳಾಂತರಿಸಬೇಕಾಗಿದೆ. ದಲಿತರ ಅಭಿವೃದ್ಧಿ, ಏಳ್ಗೆ ಬಗ್ಗೆ ಮಾತನಾಡುವ ಶಕ್ತಿಗಳು ನಾಟಕವಾಡುತ್ತಾ ದಲಿತರಿಗೆ ಸಾರಾಯಿ ಕುಡಿಸಿ ಬದುಕನ್ನು ನಾಶಪಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಮದ್ಯದಂಗಡಿಯನ್ನು ತೆರೆವುಗೊಳಿಸಲು ಹಲವು ಬಾರಿ ಪತ್ರಿಕಾ ಹೇಳಿಕೆ, ಮನವಿ ಪತ್ರ ಸಲ್ಲಿಸಿ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ. ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಹಾಗೂ ಇತ್ತೀಚೆಗೆ ಆವತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕರಾದ ಬಿ.ಬಿ.ನಿಂಗಯ್ಯರವರಿಗೆ ಇದನ್ನು ತೆರವುಗೊಳಿಸುವಂತೆ ಮನವಿ ನೀಡಲಾಗಿದೆ ಎಂದರು.
ಕೂಡಲೇ ಈ ಮದ್ಯದಂಗಡಿಯನ್ನು ಸ್ಥಳಾಂತರಿಸದಿದಲ್ಲಿ ಎಲ್ಲ ಗ್ರಾಮಸ್ಥರೊಂದಿಗೆ ಪಕ್ಷವು ಒಗ್ಗೂಡಿ ಹೋರಾಟ ರೂಪಿಸಲು ಮುಂದಾಗಬೇಕಾಗುತ್ತದೆ ಎಂದುಎಚ್ಚರಿಕೆ ನೀಡಿದ್ದಾರೆ.