ಮಹಾರಾಜನಲ್ಲ, ಆರೂವರೆ ಕೋಟಿ ಜನರ ಸೇವಕ: ಮುಖ್ಯಮಂತ್ರಿ ಸಿದ್ದರಾಮಯ್ಯ
ಚಿಕ್ಕಮಗಳೂರು, ಜೂ.3: ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರಕಾರ ದಲಿತ, ಹಿಂದುಳಿದವರು ಹಾಗೂ ರೈತರ ಪರವಾಗಿದೆ. ನಾನು ಆರೂವರೆ ಕೋಟಿ ಕರ್ನಾಟಕ ಜನರ ಸೇವಕ. ಮಹಾರಾಜನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಶುಕ್ರವಾರ ನರಸಿಂಹರಾಜಪುರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾರಾಜರ ಆಳ್ವಿಕೆ ಹೋಗಿ ಬಹಳ ಸಮಯವಾಗಿದೆ. ಪ್ರಜಾಪ್ರುತ್ವ ವ್ಯವಸ್ಥೆಯಲ್ಲಿ ಜನರೇ ನಿಜವಾದ ಮಾಲಕರು. ಅವರು ಮಾತ್ರ ಯಾವುದೇ ಬದಲಾವಣೆ ತರಬಲ್ಲರು. ಕಾಂಗ್ರೆಸ್ ಮುಕ್ತ ಮಾಡುತ್ತೇವೆಂಬ ಹೇಳಿಕೆಯೇ ಅಸಂಬದ್ಧ. ಅದೊಂದು ಭ್ರಮೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷ ಇರಬೇಕು. ಕಾಂಗ್ರೆಸ್ ಗುರಿ ರಾಜ್ಯವನ್ನು ಹಸಿವು, ಅನಕ್ಷರಸ್ಥ ಮುಕ್ತ ಮಾಡುವುದಾಗಿದೆ ಎಂದು ತಿರುಗೇಟು ನೀಡಿದರು.
ಮೂರು ವರ್ಷದಲ್ಲಿ ನಾನು ನುಡಿದಂತೆ ನಡೆದಿದ್ದೇನೆಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ. ರಾಜ್ಯ 44 ವರ್ಷಗಳ ಬಳಿಕ ಭೀಕರ ಬರಗಾಲ ಎದುರಿಸುತ್ತಿದೆ. ರಾಜಸ್ಥಾನದ ನಂತರ ದೇಶದಲ್ಲಿ ಕರ್ನಾಟಕ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ. ಮಳೆ ಬಾರದಿದ್ದರೆ ಇಲ್ಲಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ರಾಜ್ಯದ ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ತುಮಕೂರು, ಚಿತ್ರದುರ್ಗ, ಕೊಲಾರ, ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲ 1,200 ಅಡಿ ಪಾತಾಳಕ್ಕೆ ಇಳಿದಿದೆ. ಅಂತರ್ಜಲ ಮೇಲೆ ಬರಬೇಕಾದರೆ ಕೆರೆ, ಕಟ್ಟೆ ತುಂಬಿಸುವ ಯೋಜನೆ ನಿಶ್ಚಿತವಾಗಿ ಮಾಡ ಬೇಕು. ಬಯಲು ಸೀಮೆಯ ಕೆರೆ ತುಂಬಿಸುವ ಈ ಯೋಜನೆ ಪೂರ್ಣಗೊಳಿಸಲು ಸರಕಾರ ಬದ್ಧವಾಗಿದೆ. ನೀರಾವರಿ ಯೋಜನೆಗೆ ಐದು ವರ್ಷದಲ್ಲಿ 66 ಸಾವಿರ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ಇದರ ಅರ್ಧದಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಶಾಸಕರ ಕ್ಷೇತ್ರಗಳಿಗೆ ಸಮಾನವಾಗಿ ಕಾಣಲಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಮೃತರಾದ ರೈತರ ಕುಟಂಬಕ್ಕೆ ಪರಿಹಾರ ಮೊತ್ತ 2 ಲಕ್ಷದಿಂದ ಐದು ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಸಾಲ ವಸೂಲಾತಿ ಮುಂದಕ್ಕೆ ಹಾಕಲಾಗಿದೆ. ಕೆಲವರು ಸರಕಾರ ಟೇಕ್‌ಆಫ್ ಆಗಿಲ್ಲ ಎನ್ನುತ್ತಿದ್ದಾರೆ. ಇಷ್ಟೆಲ್ಲ ಕಾರ್ಯಗಳು ಹೇಗೆ ಆದುವು ಎಂದು ಪ್ರಶ್ನಿಸಿದ ಅವರು, ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಬಾರಿ ಮತ್ತು ಮಧ್ಯಮ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ 65 ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಂಡು 5 ಸಾವಿರ ಕೋಟಿ ರೂ. ವೆಚ್ಚ ಮಾಡಿ 60 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಈಗಾಗಲೇ ನಿರ್ಮಾಣ ಹಂತದಲ್ಲಿದ್ದು, ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಒತ್ತುವರಿ ಸಮಸ್ಯೆ, ಮರಳಿನ ಸಮಸ್ಯೆಗಳಿವೆ. ರಬ್ಬರ್ ಬೆಳೆಗೆ ಕೇರಳ ಮಾದರಿಯಲ್ಲಿ ಬೆಂಬಲ ಬೆಲೆ ನೀಡಬೇಕು. ಜಿಲ್ಲೆಯಿಂದ ಮಂಗಳೂರು ಮಾರ್ಗಕ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಸಮಸ್ಯೆ ಉಂಟಾಗಿದ್ದು ಇದನ್ನು ಬಗೆಹರಿಸಬೇಕು. ಶೃಂಗೇರಿ ಕ್ಷೇತ್ರಕ್ಕೆ ಅಟಲ್ ಬಿಹಾರಿ ವಾಜಪೇಯಿ ಶಾಲೆ ಕಲ್ಪಿಸಬೇಕು. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಚೈತ್ರಾಶ್ರೀ ಮಲಾತೇಶ್, ಶಾಸಕ ಜಿ.ಎಚ್.ಶ್ರೀನಿವಾಸ್, ಎಂಎಲ್‌ಸಿಗಳಾದ ಶ್ರೀನಿವಾಸ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೊಟ್ಟಮ್ಮ, ಪ್ರಾಣೇಶ್, ಜಿಲ್ಲಾಧಿಕಾರಿ ಎಸ್.ಪಿ. ಷಡಕ್ಷಾರಿ ಸ್ವಾಮಿ, ಜಿಪಂ ಸಿಇಒ ಡಾ. ಆರ್.ರಾಗಪ್ರೀಯ, ಎಸ್ಪಿಕೆ.ಸಂತೋಷ್ ಬಾಬು, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಬಿ.ಸಿ. ಗೀತಾ, ತೆಂಗು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಕಡೂರು ನಂಜಪ್ಪ, ಪಪಂ ಅಧ್ಯಕ್ಷೆ ಲೇಖಾ ವಸಂತ್ ಮತ್ತಿತ್ತರರಿದ್ದರು.
<ಭದ್ರಾ ಮೇಲ್ದೆಂಡೆ ಯೋಜನೆ ಅನುದಾನ 3,700 ಕೋಟಿ ರೂ.ನಿಂದ 12,500 ಕೋಟಿ ರೂ. ಹೆಚ್ಚಳ.
<165 ಭರವಸೆಗಳಲ್ಲಿ 123 ಭರವಸೆಗಳನ್ನು ಈಡೇರಿಸಲಾಗಿದೆ.