×
Ad

ಕೊಡಗು ವಿಶ್ವ ಸಂಸ್ಕೃತಿಯ ನಾಡು: ಸಚಿವ ಖಾದರ್

Update: 2016-06-03 22:35 IST

ವೀರಾಜಪೇಟೆ, ಜೂ.3: ಕೊಡಗು ತನ್ನ ಸಂಸ್ಕೃತಿ ಯಿಂದಾಗಿ ವಿಶ್ವದಲ್ಲೇ ವಿಶಿಷ್ಠ ಸ್ಥಾನಮಾನಗಳನ್ನು ಗಳಿಸಿಕೊಂಡಿದೆ. ಜಿಲ್ಲೆಯ ಕೀರ್ತಿಗೆ ಕುಂದುಂಟಾಗುವ ವರ್ತನೆಗಳು ನಮ್ಮಿಂದ ಉಂಟಾಗಬಾರದು ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಅವರು ಇಂದು ವಿರಾಜಪೇಟೆಯ ಪುರಭವನದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.

ಹಿರಿಯರ ಮಾರ್ಗದರ್ಶನ ದೊಂದಿಗೆ ವಿಶಾಲ ಹೃದಯವಂತಿಕೆಯಿಂದ ಸಮಾಜಸೇವೆಯಲ್ಲಿ ನಿರತರಾಗಬೇಕು. ಸಮುದಾಯಕ್ಕಾಗಿ ನೆರವಾಗುವ ಮನೋಭಾವನೆ ಹೆಚ್ಚಾಗಿ ಬೆಳೆದು ಬರಬೇಕು. ಆತ್ಮಾವಲೋಕನದಿಂದ ಯುವಪೀಳಿಗೆಯನ್ನು ಮುನ್ನಡೆಸಲು ಸಾಧ್ಯವಾಗಲಿ. ದೇಶ ಬಲಿಷ್ಠವಾಗಲು ಸುಶಿಕ್ಷಿತರ ಪಾತ್ರ ಬಹುಮುಖ್ಯ ಎಂದು ಅಭಿಪ್ರಾಯಿಸಿದರು.

ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಮಾತನಾಡಿ, ಮುಸ್ಲಿಂ ಸಮುದಾಯದ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬುದು ವಾಸ್ತವವಾಗಿದೆ. ಇದನ್ನು ಹೋಗಲಾಡಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕೊಡವ ಮುಸ್ಲಿಂ ಅಸೋಸಿಯೇಷನ್‌ನ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಿರಿಯ ಧಾರ್ಮಿಕ ಮುಖಂಡರಾದ ಪಾಯಡತಂಡ ಅಬೂಸಯ್ಯದ್ ಹುಸೈನ್ ಮುಸ್ಲಿಯಾರ್ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಹುದಿಕೇರಿ ಬಳಿ ಮಾಪಿಳ್ಳೆ ತೋಡಿನ ಭೂಸೇನೆಯ 11ರ ತಂಡವನ್ನು ಪ್ರತಿನಿಧಿಸುತ್ತಿರುವ ಸಿರಾಜ್ ಸೇರಿದಂತೆ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಪೋನ್ನಂಪೇಟೆಯ ವಿದ್ಯಾರ್ಥಿನಿ ಅಮ್ಝದ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಸಾಹಿದ್ ಬರೆದ ಶಿಕ್ಷಕರ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ ಕುವೇಯಂಡ ಹಂಝತುಲ್ಲಾ. ಪಟ್ಟಣ ಪಂಚಾಯತ್‌ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಉಪಾಧ್ಯಕ್ಷೆ ತಸ್ನೀಂ ಅಕ್ತರ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಕೊಡವ ಮುಸ್ಲಿಂ ಅಸೋಸಿಯೇಶನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಕುಂಞ ಅಬ್ದುಲ್ಲಾ ಸ್ವಾಗತಿಸಿದರು. ಇಎಂ ರಫೀಕ್ ನಿರೂಪಿಸಿದರು. ಇಸ್ಮಾಯೀಲ್ ಧನ್ಯವಾದ ಸಲ್ಲಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News