×
Ad

ಮಡಿಕೇರಿ: ಜಾನಪದ ಪಠ್ಯಕ್ರಮದಲ್ಲಿ ಅಳವಡಿಸಲು ಟಿ.ತಿಮ್ಮೇಗೌಡ ಸಲಹೆ

Update: 2016-06-03 22:37 IST

ಮಡಿಕೇರಿ, ಜೂ.3 : ಜನಪದ ದೇಶದ ತಾಯಿ ಬೇರು. ಜನಪದವನ್ನು ಮುಂದಿನ ತಲೆಮಾರಿಗೆ ಉಳಿಸುವ ಜೊತೆಗೆ ಬೆಳೆಸುವ ಕಾಯಕವಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.

ಕೊಡಗು ಜಾನಪದ ಪರಿಷತ್ ವತಿಯಿಂದ ಕುಶಾಲನಗರದ ರೈತ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಸಾಹಿತ್ಯ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡು ವಂತಾಗಲು ಶಾಲಾ ಹಂತದಲ್ಲಿ ಜಾನಪದವನ್ನು ಪಠ್ಯದಲ್ಲಿ ಅಳವಡಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು. ರಾಷ್ಟ್ರದ ಎಲ್ಲಾ ಜನರ ಜೀವ ನಾಡಿಯಾಗಿರುವ ಜನಪದ ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಇದು ನಶಿಸಿ ಹೋಗದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ಜಾತ್ಯತೀತ ಜನಪದವನ್ನು ಉಳಿಸಿಕೊಂಡು ಹೋಗಬೇಕಿದೆ. ಜನಪದ ಕಲಾವಿದರನ್ನು ಗುರುತಿಸುವುದು, ತರಬೇತಿಯನ್ನು ನೀಡುವುದು ಜನಪದ ಉತ್ಸವದ ಮೂಲ ಉದ್ದೇಶವಾಗಿದೆ ಎಂದರು.

ನಾಡಿನ ಆಚಾರ-ವಿಚಾರ, ಕಲೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಿದೆ. ಅವು ನಶಿಸಿ ಹೋಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕರೆ ನೀಡಿದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಕಲೆ, ಸಾಹಿತ್ಯ, ಪರಂಪರೆಗಳು ಆಡಳಿತದ ಅವಿಭಾಜ್ಯ ಅಂಗವಾಗಿದ್ದು, ಕಲೆ, ಸಂಸ್ಕೃತಿ ಉಳಿವಿಗೆ ಒತ್ತು ನೀಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಜಾನಪದ ವಿದ್ವಾಂಸ ಹಿ.ಶಿ.ರಾಮಚಂದ್ರ ಗೌಡ ಮಾತನಾಡಿ ನಾಗರಿಕತೆ ತಾತ್ಕಾಲಿಕವಾಗಿದ್ದು, ಸಂಸ್ಕೃತಿ ಶಾಶ್ವತವಾಗಿದೆ. ಆದ್ದರಿಂದ ಜನಪದ ಕಲೆಗಳನ್ನು ಉಳಿಸಬೇಕಿದೆ ಎಂದರು.

 ನಾವು ಜೀವಿಸುವ ಜೀವನ ಶೈಲಿಯನ್ನೇ ಜಾನಪದಎನ್ನಲಾಗುತ್ತದೆ. ಬದುಕನ್ನು ಪ್ರೀತಿಸಿದರೆ ಕುಟುಂಬವನ್ನು ಪ್ರೀತಿಸಿದಂತೆ. ಆ ದಿಸೆಯಲ್ಲಿ ತಾನೂ ಬದುಕಿ, ಇತರರನ್ನೂ ಬದುಕಿಸಬೇಕಿದೆ. ಸಂಸ್ಕೃತಿ ಎನ್ನುವುದು ತಾಯ್ತನ ಎಂದು ಅಭಿಪ್ರಾಯಿಸಿದರು.

ಕರ್ನಾಟಕ ಜಾನಪದ ಪರಿಷತ್ ಮ್ಯಾನೇಜಿಂಗ್ ಟ್ರ

  ಸ್ಟಿ ಇಂದಿರಾ ಬಾಲಕೃಷ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ, ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಘಟಕದ ಅಧ್ಯಕ್ಷ ರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಇತ್ತೀಚಿನ ನಮ್ಮ ಬದುಕಿನಲ್ಲಿ ಜಾನಪದ ಶೈಲಿ ಹೋಗಿ, ಡಿಜಿಟಲಿಕರಣವಾಗುತ್ತಿದೆ. ಪ್ರೀತಿಗೆ ಜಾಗವಿಲ್ಲ, ಸ್ವಾರ್ಥಕ್ಕೆ ಸ್ಥಾನವಿದೆ ಎಂದು ಅಭಿಪ್ರಾಯಪಟ್ಟರು.

ಗಮನ ಸೆಳೆದ ಗ್ರಾಮೀಣ ಸೊಗಡು

: ಜಾನಪದ ಉತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಹುಲ್ಲು ಹೊದಿಸಿದ ಮನೆಯಲ್ಲಿ ಲ್ಯಾಟಿನ್ ದೀಪ, ಮೊರ, ಕುಕ್ಕೆ, ಮಜ್ಜಿಗೆ ಕಡೆಯುವ ಮಂತು, ಮಡಿಕೆ, ರಾಗಿಕಲ್ಲು, ನೇಗಿಲು, ನೊಗ ಮತ್ತಿತರ ಜಾನಪದ ವಸ್ತುಗಳನ್ನು ಇಟ್ಟು ಮೆರುಗು ನೀಡಿದ್ದು, ಜಾನಪದ ಸಂಸ್ಕೃತಿಯನ್ನು ಬಿಂಬಿಸಿತು. ಊಟದಲ್ಲಿಯೂ ರಾಗಿಮುದ್ದೆ, ಸೊಪ್ಪಿನ ಸಾರು, ಹಲಸಿಕಾಯಿ ಪಲ್ಯ, ಚಿತ್ರಾನ್ನ ಹಾಗೂ ಅನ್ನ ಸಾಂಬಾರು ಇದ್ದುದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೂ ಮೊದಲು ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ಹೊರಟ ಮೆರವಣಿಗೆಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಟಿ.ತಿಮ್ಮೇಗೌಡ, ಸಂಕೇತ್ ಪೂವಯ್ಯ, ಅನಂತ ಶಯನ ಅವರು ಎತ್ತಿನ ಬಂಡಿಯಲ್ಲಿ ಸಾಗಿ ಮೆರವಣಿಗೆಗೆ ಮೆರುಗು ನೀಡಿದರು. ಡೊಳ್ಳು ಕುಣಿತ, ಪೂಜಾ ಕುಣಿತ, ವಾಲಗ, ತಮಟೆ, ಕಳಸ ಹೊತ್ತ ಮಹಿಳೆಯರು, ವಿವಿಧ ಸಮಾಜಗಳ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಜಾನಪದ ಉತ್ಸವದ ಮೆರವಣಿಗೆಯ ಮೆರುಗು ಹೆಚ್ಚಿಸಿದರು.

ಗಮನ ಸೆಳೆದ ಜಾನಪದ ವಸ್ತು ಪ್ರದರ್ಶನ: ರೊಟ್ಟಿ ಪಚ್ಚೆ, ಮಣ್ಣಿನ ಲ್ಯಾಂಪ್, ಮಣ್ಣಿನ ಹೂಜಿ, ಉಪ್ಪು ಹಾಕುವ ಬಳಪದ ಕಲ್ಲು, ಮರಳು ಭೂಮಿಯಲ್ಲಿ ನೀರು ಕುಡಿಯಲು ತೆಗೆದುಕೊಂಡು ಹೋಗುವ ತಾಮ್ರದ ಹೂಜಿ, ದೋಸೆ ಹಿಟ್ಟಿನ ಮಡಿಕೆ, ಮರದ ಕೀ ಸ್ಟ್ಯಾಂಡ್, ಉಪ್ಪು ಹಾಕುವ ಬಿದಿರು, ಕಾಫಿ ಬೇಳೆ ಬಿಸಿ ಮಾಡುವ ಯಂತ್ರ, ವಿವಿಧ ರೀತಿಯ ಬಿದಿರು, ತೇಂಗಲ, ನೂಪುಟ್ಟು ವರೆ, ಪಾನಿ, ಪರೆ, ನೇಗಿಲು, ಒನಕೆ ಮತ್ತಿತರ ಜಾನಪದ ವಸ್ತುಗಳು ಆಕರ್ಷಣಿಯವಾಗಿದ್ದವು.

ಸಾಧಕರಿಗೆ ಸನಾ್ಮನ:

ಜಾನಪದ ಸಂರಕ್ಷಕರಾದ ಬಾಚರಣಿಯಂಡ ಅಪ್ಪಣ್ಣ ಮತ್ತು ತೊಟಂಬೈಲು ಪಾರ್ವತಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕುಶಾಲನಗರ ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ.ಎ.ಚರಣ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ , ನಗರಸಭೆ ಅಧ್ಯಕ್ಷೆ ಶ್ರೀಮತಿ ಬಂಗೇರ, ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಬಿ.ಡಿ.ಮಂಜುನಾಥ್, ನಗರಸಭೆ ಆಯುಕ್ತೆ ಬಿ.ಬಿ.ಪುಷ್ಪಾವತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News