ತಹಶೀಲ್ದಾರ್ ವಿರುದ್ಧ ಜಿಲ್ಲಾಡಳಿತದಿಂದ ಸರಕಾರಕ್ಕೆ ವರದಿ
ಮಡಿಕೇರಿ, ಜೂ.4: ಮಡಿಕೇರಿ ತಾಲೂಕು ತಹಶೀಲ್ದಾರ್ ಕುಂಞಮ್ಮ ಅವರು ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿರುವ ಹಿನ್ನೆಲೆ ಜಿಲ್ಲಾಡಳಿತ ಇವರ ವಿರುದ್ಧ ಸರಕಾರಕ್ಕೆ ವರದಿ ಸಲ್ಲಿಸಿದೆ.
ಕಡತ ವಿಲೇವಾರಿ ವಿಳಂಬಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರ ವಿರುದ್ಧ ಸಾರ್ವಜನಿಕ ವಲಯದಿಂದ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ ಈ ಹಿಂದೆ ನಗರಕ್ಕೆ ಲೋಕಾಯುಕ್ತರು ಭೇಟಿ ನೀಡಿದ ಸಂದರ್ಭವೂ ತಹಶೀಲ್ದಾರ್ ಅವರ ವಿಳಂಬ ಧೋರಣೆ ವಿರುದ್ಧ ಸಾಕಷ್ಟು ಅಸಮಾಧಾನ ವ್ಯಕ್ತವಾಗಿತ್ತು. ಇತ್ತೀಚೆಗೆ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ತಾಲೂಕು ಕಚೇರಿಗೆ ಭೇಟಿ ನೀಡಿ ಸುಮಾರು 33 ಕಡತಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಚರ್ಚೆಯನ್ನು ನಡೆಸಿದ್ದರು. ಕಡತಗಳನ್ನು ಪತ್ತೆ ಹಚ್ಚಲು ನಾಲ್ಕು ದಿನಗಳ ಗಡುವು ನೀಡಿದ್ದರು. ಅಲ್ಲದೆ ತಹಶೀಲ್ದಾರ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸೂಕ್ತ ಕ್ರಮಕ್ಕಾಗಿ ಅಂದಿನ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರಿಗೆ ಸೂಚನೆ ನೀಡಿದ್ದರು. ಕಡತಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸ್ತೆದಾರ್ ಪ್ರವೀಣ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ರಚಿಸಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು. ಈ ಕಟ್ಟುನಿಟ್ಟಿನ ಕ್ರಮದಿಂದಾಗಿ 33 ಕಡತಗಳಲ್ಲಿ ಕೆಲವು ಕಡತಗಳು ಮಾತ್ರ ಪತ್ತೆಯಾಗಿದ್ದು, ಇನ್ನಷ್ಟು ಕಡತಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲವೆಂದು ತಿಳಿದು ಬಂದಿದೆ. ತಹಶೀಲ್ದಾರ್ ನಿರ್ಲಕ್ಷ ವಹಿಸಿದ ಪ್ರಕರಣಗಳು:
ಕೊಳಗದಾಳು ಗ್ರಾಮದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2013 ಜುಲೈ ತಿಂಗಳಿನಲ್ಲಿ ನ್ಯಾಯಾಲಯ ನೀಡಿದ ಸೂಚನೆಯ ನಿರ್ಲಕ್ಷ, ಚರಂಡೇಟಿ ಗ್ರಾಮದ ಜಮೀನಿನ ಖಾತೆಗೆ ಸಂಬಂಧಿಸಿದ ಕಡತ ವಿಲೇವಾರಿ ಮಾಡದೇ ಇರುವುದು, ಕೋಕೇರಿ, ಕರ್ಣಂಗೇರಿ, ತಾವೂರು, ಬಿ.ಬಾಡಗ, ಕೆ.ಪೆರಾಜೆ, ಕುಂಜಿಲ, ಕರಿಕೆ ಹಾಗೂ ಎಮ್ಮೆಮಾಡು ಗ್ರಾಮದ ವ್ಯಕ್ತಿಗಳ ಮೋಜಿಣಿ ತಂತ್ರಾಂಶದ ನಕಾಶೆ ಅರ್ಜಿಗಳನ್ನು ವಿಲೇವಾರಿ ಮಾಡದೆ ಇರುವುದು ಸೇರಿದಂತೆ ತಹಶೀಲ್ದಾರ್ ಕುಂಞಮ್ಮ ಅವರ ಕರ್ತವ್ಯ ಲೋಪದ ಇನ್ನೂ ಕೆಲವು ಅಂಶಗಳನ್ನು ಸರಕಾರಕ್ಕೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಗಳಲ್ಲಿ ಬಹುತೇಕ ಅರ್ಜಿಗಳನ್ನು ಸರಳ ಪ್ರಕ್ರಿಯೆಗಳ ಮೂಲಕ ವಿಲೇವಾರಿ ಮಾಡಬಹುದಾಗಿತ್ತಾದರೂ ತಹಶೀಲ್ದಾರ್ ಯಾವುದೇ ಕಾರಣಗಳಿಲ್ಲದೆ ವಿಳಂಬ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಸೇರಿದಂತೆ ಅಧಿಕಾರಿಗಳ ತಂಡ ನೀಡಿದ ವರದಿಯ ಆಧಾರದಲ್ಲಿ ಹಿಂದಿನ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ತಹಶೀಲ್ದಾರ್ ಕುಂಞಮ್ಮ ಅವರ ಕರ್ತವ್ಯ ಲೋಪದ ವಿರುದ್ಧ ಸರಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕುಂಞಮ್ಮ ಅವರ ವಿರುದ್ಧ ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ಹಾಗೂ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ತಹಶೀಲ್ದಾರ್ ಮಟ್ಟದ ಅಧಿಕಾರಿಗಳ ವಿರುದ್ಧ ಸರಕಾರಕ್ಕೆ ಮಾತ್ರ ಕ್ರಮ ಕೈಗೊಳ್ಳಲು ಅವಕಾಶವಿದ್ದು, ಕುಂಞಮ್ಮ ಅವರ ವಿರುದ್ಧ ಜಿಲ್ಲಾಡಳಿತ ನೀಡಿರುವ ವರದಿ ಆಧಾರದಲ್ಲಿ ಸರಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.