×
Ad

ಆರೋಪಿಗಳು ಪರಾರಿ, ಸೊತ್ತು ವಶ

Update: 2016-06-04 22:12 IST

ಸಾಗರ, ಜೂ.4: ತಾಲೂಕಿನ ಕೌತಿ, ಯಲಕುಂದ್ಲಿ ಸುತ್ತಮುತ್ತ ಪ್ರದೇಶಗಳಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಲು ಸಂಗ್ರಹಿಸಿಡಲಾಗಿದ್ದ ಬೆಲ್ಲದ ಕೊಳೆ ಹಾಗೂ ಕಳ್ಳಭಟ್ಟಿ ತಯಾರಿಕೆಗೆ ಬಳಸುತ್ತಿದ್ದ ಪರಿಕರಗಳನ್ನು ಶುಕ್ರವಾರ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮೂರು ತಂಡಗಳಲ್ಲಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಕೌತಿಯ ಬಾಳೆ ತೋಟದಲ್ಲಿ ಹಾಗೂ ಯಲಕುಂದ್ಲಿ ಹೊಳೆಯ ದಂಡೆಯಲ್ಲಿ ಬಚ್ಚಿಟ್ಟಿದ್ದ 640 ಲೀ. ಬೆಲ್ಲದ ಕೊಳೆ, 150 ಲೀ. ಸಾಮರ್ಥ್ಯದ 5 ಅಲ್ಯೂಮಿನಿಯಂ ಹಂಡೆಗಳು, 30 ಲೀ. ಸಾಮರ್ಥ್ಯದ 6 ಅಲ್ಯೂಮಿನಿಯಂ ಹಂಡೆಗಳು, 2 ಕಬ್ಬಿಣದ ಒಲೆ, ಬೆಲ್ಲದ ಕೊಳೆ ತುಂಬಿದ 40 ಪ್ಲಾಸ್ಟಿಕ್ ಕ್ಯಾನ್‌ಗಳನ್ನು ದಾಳಿ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ.

ದಾಳಿ ಸಂದರ್ಭದಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಆರೋಪಿಗಳಾದ ಮಂಜಪ್ಪ ಬಿನ್ ಮೈಲಪ್ಪ, ಬಸವರಾಜ ಬಿನ್ ಮಂಜಪ್ಪ ಹಾಗೂ ಮಂಜುನಾಥ ಬಿನ್ ಪುಟ್ಟಪ್ಪ ತಲೆ ಮರೆಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ಕೈಗೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲಾ ಅಬಕಾರಿ ಉಪ ಆಯುಕ್ತ ವೈ.ಆರ್.ಮೋಹನ್ ಅವರ ನಿರ್ದೇಶನದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕಿ ಡಿ.ಲೀಲಾವತಿ, ಸೈಯದ್ ತಫಜುಲ್ಲಾ, ಜಿಲ್ಲಾ ವಿಚಕ್ಷಣ ದಳದ ನಿರೀಕ್ಷಕ ಹನುಮಂತಪ್ಪ ಡಿ.ಎನ್., ಅಬಕಾರಿ ಉಪ ನಿರೀಕ್ಷಕ ಜಿ.ಅಣ್ಣಪ್ಪ, ರಕ್ಷಕರಾದ ವೀರಭದ್ರಪ್ಪ, ಪುಟ್ಟಪ್ಪ, ಗುರುಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News