ದೇಶದಲ್ಲಿ ಶೇ.80 ನಿರುದ್ಯೋಗಿಗಳು: ಕಾಗೋಡು ಆತಂಕ
ಸಾಗರ, ಜೂ. 4: ದೇೀಶದಲ್ಲಿ 125 ಕೋಟಿ ಜನರಿದ್ದು, ಶೇ. 80ರಷ್ಟು ಜನರು ಉದ್ಯೋಗಗಳ ನಿರೀಕ್ಷೆಯಲ್ಲಿರುವವರು. ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಪುಣ್ಯದ ಕೆಲಸ. ಅಂತಹ ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪಹೇಳಿದರು.
ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಸ್ಯಾನ್ ಐಟಿ ಸೆಲ್ಯೂಷನ್ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉದ್ಯೋಗಮೇಳದಲ್ಲಿ ಅಭ್ಯರ್ಥಿಗಳಿಗೆ ಉದ್ಯೋಗ ಮಾಹಿತಿಯುಳ್ಳ ಪುಸ್ತಕ ವಿತರಿಸಿ ಅವರು ಮಾತನಾಡುತ್ತಿದ್ದರು.
ಪ್ರೌಢಶಿಕ್ಷಣ ಹಂತದಲ್ಲಿಯೆ ಪಠ್ಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಮಾಹಿತಿಯನ್ನು ಅಳವಡಿಸುವ ಅಗತ್ಯವಿದೆ. ಮಕ್ಕಳಿಗೆ ಕೃಷಿ, ಗೃಹ ಹಾಗೂ ಗುಡಿ ಕೈಗಾರಿಕೆ ಕುರಿತು ಅರಿವು ಮೂಡಿಸಬೇಕು. ಇದರಿಂದ ಪದವಿ ನಂತರ ಅವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು. ವಿಧಾನಸಭೆಯಿಂದ ರಾಜ್ಯಸಭೆಗೆ ಕೈಗಾರಿಕೋದ್ಯ ಮಿಗಳು, ಬಂಡವಾಳಶಾಹಿಗಳು ಹೋಗುತ್ತಿದ್ದಾರೆ. ಹೋದವರು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಬಗ್ಗೆ ಚಕಾರ ಎತ್ತುವುದಿಲ್ಲ. ಎಲ್ಲಿಯವರೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದಿಲ್ಲವೋ ಅಲ್ಲಿಯವರೆಗೆ ನಿರುದ್ಯೋಗ ಸಮಸ್ಯೆ ಜೀವಂತವಾಗಿರುವುದು ಎಂದು ಆತಂಕ ವ್ಯಕ್ತ ಪಡಿಸಿದರು.
ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಕೆಲವು ಬ್ಯಾಂಕ್‌ಗಳು ಸಾಲಸೌಲಭ್ಯ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಅಂತಹ ಪ್ರಕರಣಗಳನ್ನು ನನಗೆ ತಿಳಿಸಲು ಹೇಳಿದ್ದೇನೆ. ಉದ್ಯೋಗ ಕೈಗೊಳ್ಳುವವರಿಗೆ ಸಾಲಸೌಲಭ್ಯ ಕೊಡಲು ಸತಾಯಿಸುವ ಬ್ಯಾಂಕ್‌ಗಳ ಎದುರು ನಾನೇ ಧರಣಿ ನಡೆಸುತ್ತೇನೆ. ಉದ್ಯೋಗ ಮೇಳಗಳು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಆಶ್ರಯಧಾಮವಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ವಹಿಸಿದ್ದರು. ಶಾಸಕ ಮಧು ಬಂಗಾರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎನ್.ಮಂಜುನಾಥ ಗೌಡ, ಕಾಡಾ ಅಧ್ಯಕ್ಷ ಮಹಾದೇವಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ವೇತಾ ಆರ್. ಬಂಡಿ, ಅನಿತಾಕುಮಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ನಂದಿನಿ ಶೇಟ್, ರಾಜಶೇಖರ ಕುಪ್ಪಗಡ್ಡೆ ಮತ್ತಿತರರು ಉಪಸ್ಥಿತರಿದ್ದರು.