×
Ad

270 ಕೋಟಿ ರೂ. ವೆಚ್ಚದಲ್ಲಿ ಜಲಾಶಯಗಳ ಅಭಿವೃದ್ಧಿಗೆ ಕ್ರಮ: ಸಚಿವ ಪಾಟೀಲ್

Update: 2016-06-04 22:15 IST

ಚಿಕ್ಕಮಗಳೂರು, ಜೂ.4: ರಾಜ್ಯದ ಪ್ರಮುಖ ಎಲ್ಲಾ ಜಲಾಶಯಗಳ ಅಭಿವೃದ್ಧಿಗೆ ವಿಶ್ವಬ್ಯಾಂಕ್ ನೆರವಿನಿಂದ 270 ಕೋಟಿ ರೂ. ವೆಚ್ಚದಲ್ಲಿ ಸುರಕ್ಷಾ ಕಾರ್ಯಕ್ರಮವನ್ನು ಹಂತ, ಹಂತ ವಾಗಿ ಕೈಗೊಳ್ಳ ಲಾಗುವುದು ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಅವರು ತರೀಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ಕಾಮಗಾರಿ ಪ್ರದೇಶದಲ್ಲಿ ರೈತರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಲಾಗುವುದು. ಅಜ್ಜಂಪುರದ ಬಳಿ ಕಾಲುವೆ ಹೋಗುವ ಸುರಂಗ ಮಾರ್ಗದಲ್ಲಿ ಬರುವ ಭಾಗದ ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು. ಕಾಲುವೆಯಿಂದ ತೊಂದರೆಯುಳ್ಳವರಿಗೆ ಬೋರ್‌ವೆಲ್, ಹನಿ ನೀರಾವರಿ ಮುಂತಾದ ನೀರಾವರಿ ವ್ಯವಸ್ಥೆಗಳನ್ನು ಕಲ್ಪಿಸಲಾ ಗುವುದು ಎಂದು ಭರವಸೆ ನೀಡಿದರು.

 ಭದ್ರಾ ಮೇಲ್ದಂಡೆ ಕಾಲುವೆಯಿಂದ 20 ಸಾವಿರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಒದಗಿಸುವುದರ ಜೊತೆಗೆ ತಾಲೂಕಿನ 81 ಕೆರೆಗಳಿಗೆ ನೀರನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೋದಿರಾಯನಹಳ್ಳ ಮಾರ್ಗ ಪರಿವರ್ತನೆ ಕಾರ್ಯವನ್ನು 40 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅಮೃತಾಪುರ ಹೋಬಳಿಯಲ್ಲಿ ಉಬ್ರಾಣಿ ಏತ ನೀರಾವರಿಯಿಂದ ಕೆರೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

   ರಾಜ್ಯದ ಎಲ್ಲ ಡ್ಯಾಂಗಳ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಇನ್ನೂ 150 ಕೋಟಿ ರೂ. ವೆಚ್ಚ ಮಾಡಲು ಕ್ರಮ ಕೈಗೊಳ್ಳಲಾಗುವುದು. ಭದ್ರಾ ಮೇಲ್ದಂಡೆ ಕಾಲುವೆಯಿಂದ ತರೀಕೆರೆ ತಾಲೂಕಿನ ಜನತೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

  ಈ ವೇಳೆ ಭದ್ರಾ ಮೇಲ್ದಂಡೆ ಯೋಜನೆಯ ಅಧೀಕ್ಷಕ ಇಂಜಿನಿಯರ್ ತಿಪ್ಪೇಸ್ವಾಮಿ, ಕಾರ್ಯಪಾಲಕ ಇಂಜಿನಿಯರ್ ಎ.ಎಸ್. ಪಾಟೀಲ್, ಸಹಾಯಕ ಕಾರ್ಯಪಾಲಕ ಇಂಜಿಯರ್‌ಗಳಾದ ಶಶಿಧರ್, ಓಂಕಾರಪ್ಪ, ಯತೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News