×
Ad

ಸ್ವಾಭಿಮಾನಿಗಳಾಗಿ ಬದುಕಿ ಎಂದು ಪೊಲೀಸರಿಗೆ ಕರೆ ನೀಡಿದ ನಕ್ಸಲರು

Update: 2016-06-04 22:21 IST

ತೀರ್ಥಹಳ್ಳಿ, ಜೂ.4: ಇಲ್ಲಿನ ಗಾರ್ಡರ ಗದ್ದೆ ಬಸ್‌ಸ್ಟಾಪ್‌ನಲ್ಲಿ ನಕ್ಸಲರ ಬ್ಯಾನರ್‌ವೊಂದು ಪತ್ತೆಯಾಗಿದ್ದು, ಅದರಲ್ಲಿ ಪೊಲೀಸರಿಗೆ ನಮ್ಮೆಂದಿಗೆ ಸ್ವಾಭಿಮಾನಿಗಳಾಗಿ ಬದುಕಿ ಎಂದು ಕರೆ ನೀಡಿದ್ದಾರೆ.

 ಇಂದು ರಾಜ್ಯಾದ್ಯಂತ ಪೊಲೀಸರು ಒಂದು ದಿನದ ಮುಷ್ಕರ ಹೂಡುವರೆಂದು ಸುದ್ದಿಯಾಗಿದ್ದು, ಅದೇ ಸಂದರ್ಭದಲ್ಲಿ ನಕ್ಸಲರದು ಎಂದು ಹೇಳಲಾಗಿರುವ ಈ ಬ್ಯಾನರಿನಲ್ಲಿ ಸೂರ್ಯನನ್ನು ಅಂಗೈನಿಂದ ಮುಚ್ಚಲು ಸಾಧ್ಯವಿಲ್ಲ. ಅಧಿಕಾರಶಾಹಿ ದಬ್ಬಾಳಿಕೆಯ ಸರಕಾರದ ನೀತಿಯಿಂದ ದುರ್ಬಲರ, ಬಡವರ ಶೋಷಣೆ ನಿರಂತರ. ಹಾಗಾಗಿ ಪೊಲೀಸರು ಈ ದಯನೀಯ ಸ್ಥಿತಿಯಿಂದ ಹೊರಬಂದು ನಮ್ಮನ್ನು ಬೆಂಬಲಿಸಿ ಸ್ವಾಭಿಮಾನಿಗಳಾಗಿ ಬದುಕಿ. ಜೀತದಾಳಾಗಿ ಬದುಕುವ ಬದಲು ನಮ್ಮನ್ನು ಬೆಂಬಲಿಸಿ -ಸಿಪಿಐ (ಮಾವೋವಾದಿ) ಎಂದು ಬರೆಯಲಾಗಿದೆ.

ಆಗುಂಬೆ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಳ್ಳುವುದು ವಿರಳವಾಗಿದೆ. ಅವರ ಕಾರ್ಯ ಚಟುವಟಿಕೆಯನ್ನು ನಿಲ್ಲಿಸಿದ್ದಾರೆ ಎನ್ನುವ ಹೊತ್ತಿಗೆ ಈ ಬ್ಯಾನರ್ ಕಾಣಿಸಿಕೊಂಡಿರುವುದು ಪೊಲೀಸ್ ಇಲಾಖೆಗೆ ತಲೆನೋವು ಉಂಟುಮಾಡಿದೆ.

ವಾಸ್ತವವಾಗಿ ಆಗುಂಬೆ ಪ್ರದೇಶದ ಸುತ್ತಮುತ್ತಲ ಹಳ್ಳಿಗಳು ಈಗಲೂ ಸಹ ಕುವೆಂಪುರವರ ಕಾದಂಬರಿಗಳಲ್ಲಿ ಕಂಡು ಬರುವಂತಹ ರಸ್ತೆಗಳ ವರ್ಣನೆಯಂತಹ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದು, ಬದಲಾಗಿಲ್ಲ. ಅಲ್ಲದೇ ನಕ್ಸಲರು ಕಾಣಿಸಿಕೊಳ್ಳುವವರೆಗೂ ಚುನಾಯಿತ ಪ್ರತಿನಿಧಿಗಳಾಗಲಿ, ಸರಕಾರವಾಗಲಿ ಅಲ್ಲಿಗೆ ರಸ್ತೆ, ನೀರು, ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸಿಕೊಡಬೇಕೆಂದು ಗಂಭೀರವಾಗಿ ಪ್ರಯತ್ನಿಸಿಯೂ ಇರಲಿಲ್ಲ.

2005ರಲ್ಲಿ ನಕ್ಸಲ್ ನಾಯಕ ಸಾಕೇತನ್ ರಾಜನ್ ಎನ್‌ಕೌಂಟರ್ ಬಳಿಕ ನಕ್ಸಲರು ದೊಡ್ಡ ಮಟ್ಟದಲ್ಲಿ ಇಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಬಯಲಿಗೆ ಬಂದಿತ್ತು. ಬಳಿಕ ಆಗುಂಬೆಯಲ್ಲಿ ನಕ್ಸಲ್ ನಿಗ್ರಹ ದಳವನ್ನು ಸ್ಥಾಪಿಸಲಾಗಿತ್ತಲ್ಲದೇ, ಅದು ಇಂದಿಗೂ ಕೂಡ ಕಾರ್ಯ ನಿರ್ವಹಿಸುತ್ತಿದೆ. ಅನುದಾನಗಳು ಕೂಡ ಕೋಟಿಗಳ ಲೆಕ್ಕದಲ್ಲಿ ಬಂದಿದ್ದರೂ ಹೇಳಿಕೊಳ್ಳುವಂತಹ ಕೆಲಸ ನಡೆದಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಅಲ್ಲದೆ ನಕ್ಸಲ್ ಪ್ಯಾಕೇಜ್ ನೆರವನ್ನು ಅಭಿವೃದ್ಧಿಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮಗಳಿಗೆ ಅದರ ಪ್ರಯೋಜನ ತಲುಪಿದ್ದು ಸಹ ತೃಪ್ತಿದಾಯಕ ಮಟ್ಟದಲ್ಲಿಲ್ಲ ಎನ್ನುವುದು ಕೂಡ ಇಲ್ಲಿ ಸಾಮಾನ್ಯವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಪೊಲೀಸರಿಗೆ ದಾಸ್ಯದಿಂದ ಹೊರ ಬನ್ನಿ ಎಂದು ನಕ್ಸಲರು ಕರೆ ನೀಡಿರುವುದು ಚರ್ಚೆಗೆ ಈಡಾಗಿದೆ. ವಿಚಾರ ತಿಳಿದ ತಕ್ಷಣ ಡಿವೈಎಸ್ಪಿ ರಾಮಚಂದ್ರ ನಾಯ್ಕಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬ್ಯಾನರ್‌ನ್ನು ವಶಕ್ಕೆ ಪಡೆದುಕೊಂಡಿದ್ದು ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News