×
Ad

ರಸ್ತೆಗೆ ಜಾಗ ಮೀಸಲಿಟ್ಟರೆ ಮಾತ್ರ ಮನೆ ನಿರ್ಮಿಸಲು ಅನುಮತಿ: ಮೂಡಾ ಸ್ಪಷ್ಟಣೆ

Update: 2016-06-04 22:22 IST

ಮಡಿಕೇರಿ ಜೂ.4 : ನಗರ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ರಸ್ತೆಗಾಗಿ 6ಮೀ ಸ್ಥಳ ಮೀಸಲಿಟ್ಟರೆ ಮಾತ್ರ ಮನೆ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಸುರಯ್ಯಾ ಅಬ್ರಾರ್ ಸ್ಪಷ್ಟ ಸೂಚನೆ ನೀಡಿದ್ದಾರೆ.

ಪ್ರಾಧಿಕಾರದ ಕಚೇರಿಯಲ್ಲಿ ನಡೆದ ನೋಂದಾಯಿತ ಇಂಜಿನಿಯರ್‌ಗಳು ಮತ್ತು ಡೆವಲಪರ್ಸ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ನಿರ್ಮಾಣಗೊಂಡಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಹಲವು ಮನೆಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದನ್ನು ಉಲ್ಲೇಖಿಸಿದರು.

ಮನೆ ನಿರ್ಮಿಸುವ ಸಂದರ್ಭ 6ಮೀ ರಸ್ತೆಗೆ ಜಾಗ ಬಿಡಬೇಕು. ಹಾಗಿದ್ದರೆ ಮಾತ್ರ ಪ್ರಾಧಿಕಾರದಿಂದ ಅನುಮತಿ ನೀಡಲಾಗುವುದು. ಆದರೆ ನಗರದ ಇಂದಿರಾ ನಗರ, ಚಾಮುಂಡೇಶ್ವರಿ ನಗರ, ಗಣಪತಿ ಬೀದಿ, ತ್ಯಾಗರಾಜ ಕಾಲೋನಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ವಾಹನ ಸಂಚಾರಕ್ಕೂ ರಸ್ತೆಗಳಿಲ್ಲ. ಅಂತಹ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಹೇಗೆ ಅನುಮತಿ ನೀಡಲಾಯಿತು ಎಂದು ಅಧ್ಯಕ್ಷರು ಆಕ್ಷೇಪಿಸಿದರಲ್ಲದೆ, ಇನ್ನು ಮುಂದೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಹಳೆಯ ಮನೆಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ನೂತನ ಮನೆ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೂ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿದ್ದು, ರಸ್ತೆ ಹಾಗೂ ಸ್ಥಳ ಪರಿಶೀಲಿಸಿದ ಬಳಿಕ ಇಂಜಿನಿಯರ್ ಅನುಮತಿ ನೀಡಲಿದ್ದಾರೆ ಎಂದು ಆಯುಕ್ತ ರಾಜಶೇಖರ್ ಸಭೆಗೆ ತಿಳಿಸಿದರು.

ಶೆಡ್ ನಿರ್ಮಾಣಕ್ಕೆ ಅನುಮತಿ ಕಡ್ಡಾಯ:

ನಗರದ ಕೈಗಾರಿಕಾ ಬಡಾವಣೆಯಲ್ಲಿ ಅನಧಿಕೃತವಾಗಿ ಶೆಡ್‌ಗಳು ನಿರ್ಮಾಣವಾಗುತ್ತಿರುವ ಬಗ್ಗೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಕೆಂಗಣ್ಣು ಬೀರಿದ್ದು, ಇನ್ನು ಮುಂದೆ ನಗರ ವ್ಯಾಪ್ತಿಯಲ್ಲಿ ಶೆಡ್‌ಗಳ ನಿರ್ಮಾಣಕ್ಕೂ ಅನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.

ನಗರದ ಕೈಗಾರಿಕಾ ಬಡಾವಣೆಯಲ್ಲಿ ಶೆಡ್‌ಗಳು ನಿರ್ಮಾಣವಾಗುತ್ತಿದ್ದು, ಇವುಗಳಿಗೆ ಅನುಮತಿ ಪಡೆಯಲಾಗಿದೆಯೇ ಎಂದು ಆಯುಕ್ತರು ಪ್ರಶ್ನಿಸಿದರು.

ತಾತ್ಕಾಲಿಕವಾಗಿ ಶೆಡ್ ನಿರ್ಮಿಸುವುದಾಗಿ ಹೇಳಿಕೊಂಡು ಕೆಲವರು 10, 15ವರ್ಷಗಳವರೆಗೂ ಅವುಗಳನ್ನು ಉಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಂತಹ ಶೆಡ್‌ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೆ ಮುಂದೆ ಶೆಡ್ ನಿರ್ಮಾಣಕ್ಕೂ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಬೇಕು ಎಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News