ಸೊರಬ: ಪೊಲೀಸರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ
ಸೊರಬ, ಜೂ.4: ಉದ್ಯೋಗಕ್ಕೆ ತಕ್ಕ ವೇತನ, ವಾರಕ್ಕೊಂದು ರಜೆ ಸೇರಿದಂತೆ ವಿವಿಧ ನ್ಯಾಯಸಮ್ಮತ ಪೊಲೀಸರ ಆವಶ್ಯಕತೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಶನಿವಾರ ವಿವಿಧ ಸಂಘಟನೆಗಳ ವತಿಯಿಂದ ತಹಶೀಲ್ದಾರ್ ಕವಿತಾ ಯೋಗಪ್ಪನವರ್ ಅವರಿಗೆ ಮನವಿ ಸಲ್ಲಿಸಲಾಯಿತು. ದಲಿತರ-ಹಿಂದುಳಿದವರ-ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಒಕ್ಕೂಟದ ತಾಲೂಕು ಸಂಚಾಲಕ ಟಿ. ರಾಜಪ್ಪ ಮಾಸ್ತರ್ ಮಾತನಾಡಿ, ಸಾರ್ವಜನಿಕರ ರಕ್ಷಣೆಗೆ ಸದಾ ಸಿದ್ಧರಿರುವ ಪೊಲೀಸರ ನೈತಿಕ ಬಲ ಹೆಚ್ಚಿಸುವಲ್ಲಿ ಸಾರ್ವಜನಿಕರು ಮುಂದಾಗಬೇಕಾಗಿದೆ. ಪೊಲೀಸರು ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಸಹ ಸರಕಾರ ಅವಕಾಶ ನೀಡುತ್ತಿಲ್ಲ. ಇಲಾಖೆ ಮತ್ತು ಸರಕಾರ ಹೋರಾಟವನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು. ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಜೇಡಗೇರಿ ಮಾತನಾಡಿ, ಜನರ ರಕ್ಷಣೆಗೆ ಸದಾ ಸಿದ್ಧರಿರುವ ಪೊಲೀಸರ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಮಾಜದ ಶಾಂತಿಯನ್ನು ಕಾಪಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ನಿತ್ಯ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಪೊಲೀಸರು ಸರಕಾರ ನಿಗದಿ ಪಡಿಸಿದ ವಯಸ್ಸಿನ ಮೊದಲೇ ನಿವೃತ್ತಿ ಕೊಡಿ ಎಂದು ಕೇಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಪೊಲೀಸರ ಪರವಾಗಿ ನಿಂತ ಸಂಘ-ಸಂಸ್ಥೆಗಳ ವಿರುದ್ಧ ಪೊಲೀಸ್ ಉನ್ನತಾಧಿಕಾರಿಗಳು ಕೆಂಗಣ್ಣು ಬೀರುತ್ತಿರುವುದು ವಿಪರ್ಯಾಸ ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಪಾಟೀಲ್ ಮಾತನಾಡಿ, ನೆರೆ ರಾಜ್ಯಗಳ ಮಾದರಿಯಲ್ಲಿ ನಮ್ಮ ರಾಜ್ಯದ ಪೊಲೀಸರಿಗೂ ಸಮಾನವಾಗಿ ವೇತನ ನೀಡಬೇಕು. ಪೊಲೀಸರಿಗೆ ಗುಣ ಮಟ್ಟದ ಆಹಾರ ಪೂರೈಕೆಯಾಗಬೇಕು. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಲ್ಪಿಸಲು ಅವಿರತ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಹಲವು ಆವಶ್ಯಕತೆಗಳನ್ನು ಈಡೇರಿಸುವತ್ತ ರಾಜ್ಯ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಪಟ್ಟಣದ ರಂಗನಾಥ ಸ್ವಾಮಿ ದೇವಾಲಯದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಯುವ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಭಂಡಾರಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ದ ಅಧ್ಯಕ್ಷ ವಿಜಯಗೌಳಿ, ಪ್ರಮುಖರಾದ ನೆಮ್ಮದಿ ಸುಬ್ಬು, ವೀರೇಶ್ ಗೌಡ, ಹೇಮರಾಜ್ ಪಾಟೀಲ್, ಅಬ್ದುಲ್ ರಶೀದ್, ಅಣ್ಣಪ್ಪಮೇಸ್ತ್ರಿ, ರಾಕೇಶ್, ಕುಮಾರ್ ಬಿಳಗೋಡು, ಪ್ರಶಾಂತ ಜೆ. ನಾಯ್ಕ್ಕಿ, ಪ್ರಸನ್ನ, ಪ್ರದೀಪ್ ಕುಮಾರ್, ಡಾಕಪ್ಪ, ಪುಂಡಲೀಕ, ಶ್ರೀಧರಾಚಾರ್, ವಿಕ್ರಮ್, ರಾಜು, ಮಹೇಶ್, ಕೃಷ್ಣಪ್ಪ, ಮೋಹನ್, ಗಿರೀಶ್, ಮೊದಲಾದವರಿದ್ದರು.