×
Ad

ಸ್ವಚ್ಛ ನಗರದ ಗುರಿ ನಮ್ಮದಾಗಿರಲಿ: ಸುರೇಶ್ ಹೆಬ್ಳೇಕರ್

Update: 2016-06-04 22:24 IST

ಕಾರವಾರ, ಜೂ.4: ಸ್ವಚ್ಛ ನಗರದ ಗುರಿ ಪ್ರತಿಯೊಬ್ಬರಲ್ಲಿರಲಿ, ಜನರು ಸ್ವಚ್ಛತೆ ಜಾಗೃತರಾಗಿ ನಗರವನ್ನು ನಂಬರ್ ಒನ್ ಸ್ವಚ್ಛ ನಗರವನ್ನಾಗಿಸಬೇಕು ಎಂದು ಸಿನಿಮಾ ನಿರ್ದೇಶಕ ಸುರೇಶ್ ಹೆಬ್ಳೇಕರ್ ಹೇಳಿದ್ದಾರೆ.

ನಗರದಲ್ಲಿ ಪಹರೆ ವೇದಿಕೆ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ 75ನೆ ವಾರ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸ್ವಚ್ಛತೆ ಬಗ್ಗೆ ಸಂಚಲನವನ್ನು ಮೂಡಿಸಿ ಪ್ರತಿಯೊಬ್ಬರನ್ನು ಜಾಗೃತಗೊಳಿಸುತ್ತಿರುವ ಸಂಘಟನೆ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಇಂದು ನಾವು ವಾಸಿಸುವ ಪ್ರದೇಶ ಸ್ವಚ್ಛವಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಜೊತೆಗೆ ನಗರೀಕರಣದಿಂದಾಗುತ್ತಿರುವ ಪರಿಸರ ನಾಶದ ಬಗ್ಗೆ ಜಾಗೃತಿ ಮೂಡಿಸಬೇಕು. ಪಶ್ಚಿಮ ಘಟ್ಟಗಳು ನೀರಿನ ಟಾಂಕಿ ಇದ್ದ ಹಾಗೆ. ಇಲ್ಲಿನ ಮಣ್ಣು ಹಾಗೂ ಪರಿಸರ ಹೆಚ್ಚು ನೀರು ಇಂಗುವ ಹಾಗೆ ಮಾಡುತ್ತದೆ. ಇದರಿಂದಾಗಿಯೇ ಇಂದು ನಾವು ಉತ್ತಮ ವಾತಾವರಣದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಮಾತನಾಡಿ, ಜಿಲ್ಲೆಯಲ್ಲಿನ ಅರಣ್ಯ ಭೂಮಿಯನ್ನು ಪ್ರತಿಯೊಬ್ಬರು ರಕ್ಷಣೆ ಮಾಡಬೇಕು. ಇದು ಕೇವಲ ನಮ್ಮ ಆಸ್ತಿಯಲ್ಲ. ಜಗತ್ತಿನಲ್ಲಿ ಜೀವಿಸುವ ಪ್ರತಿಯೊಂದು ಜೀವಿಯ ಆಧಾರ ಸ್ತಂಬವಾಗಿದೆ. ಪಹರೆ ವೇದಿಕೆಯಂತೆ ಇತರ ಸಂಘಟನೆಗಳು ಮುಂದೆ ಬಂದು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮ ಪೂರ್ವದಲ್ಲಿ ಬೀಚ್ ವಾಲಿಬಾಲ್ ಅಂಕಣವನ್ನು ನಿರ್ದೇಶಕ ಸುರೇಶ ಹೆಬಳೆಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯ್ಕ, ವಲಯ ಅರಣ್ಯಾಧಿಕಾರಿ ಮಂಜುನಾಥ ನಾವಿ, ಮೀನುಗಾರ ಮಹಿಳಾ ಸಂಘಟನೆ ಅಧ್ಯಕ್ಷೆ ಸುಶೀಲಾ ಹರಿಕಂತ್ರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News