ಕಾಂಗ್ರೆಸ್ ಅಭ್ಯರ್ಥಿಗೆ ನಮ್ಮ ಮತ: ಝಮೀರ್‌ಅಹ್ಮದ್
ಬೆಂಗಳೂರು, ಜೂ.4: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಮ್ಮ ಮತ ಚಲಾಯಿಸುತ್ತೇವೆ ಎಂದು ಜೆಡಿಎಸ್ ಶಾಸಕ ಝಮೀರ್ ಅಹ್ಮದ್‌ಖಾನ್ ಪುನರುಚ್ಚರಿಸಿದ್ದಾರೆ.
ಶನಿವಾರ ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಉದ್ಯಮಿ ಬಿ.ಎಂ.ಫಾರೂಖ್ ಅವರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಿರುವ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಜೆಡಿಎಸ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ದಾನೀಶ್ ಅಲಿಗೆ ಟಿಕೆಟ್ ನೀಡಿದ್ದರೆ ನಾವು ಬೆಂಬಲ ನೀಡುತ್ತಿದ್ದೆವು. ಆದರೆ, ನಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯದೆ ಇದ್ದಂತಹ ವ್ಯಕ್ತಿಗೆ ರಾಜ್ಯಸಭೆ ಚುನಾವಣೆಯ ಟಿಕೆಟ್ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಝಮೀರ್‌ಅಹ್ಮದ್ ಪ್ರಶ್ನಿಸಿದರು.
ದೇವೇಗೌಡರದ್ದು ನಾಟಕ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಾನು ಮುಸ್ಲಿಮ್ ಪರ ಇರುವಂತೆ ನಾಟಕವಾಡುತ್ತಿದ್ದಾರೆ. ಫಾರೂಕ್‌ರ ಕಣಕ್ಕಿಳಿಸುವ ಮೂಲಕ ನನಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಆದರೆ, ಈ ಝಮೀರ್‌ಗೆ ಟಾಂಗ್ ಕೊಡೋಕೆ ಈ ಜನ್ಮದಲ್ಲಿ ಭಗವಂತನನ್ನು ಬಿಟ್ಟರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ತಿರುಗೇಟು ನೀಡಿದರು.
ದೇವೇಗೌಡರು ನಿಜವಾಗಿಯೂ ಮುಸ್ಲಿಮರ ಪರವಾಗಿಯೇ ಇದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರವನ್ನು ಮುಸ್ಲಿಮ್ ಅಭ್ಯರ್ಥಿಗೆ ಬಿಟ್ಟುಕೊಡಲಿ ಎಂದು ಝಮೀರ್‌ಅಹ್ಮದ್ ಸವಾಲು ಹಾಕಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಂ.ಫಾರೂಕ್ ನಡುವೆ ವ್ಯವಹಾರವಿರುವು ದರಿಂದಲೆ ಅವರಿಗೆ ರಾಜ್ಯಸಭೆಯ ಟಿಕೆಟ್ ನೀಡಲಾಗಿದೆ. ನಾನು ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.