×
Ad

ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ

Update: 2016-06-04 23:55 IST

ಬೆಂಗಳೂರು, ಜೂ.5: ಬಳ್ಳಾರಿ ಜಿಲ್ಲ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಮತ್ತೆ ಸುದ್ದಿಯಲ್ಲಿದ್ದಾರೆ. 6 ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಅವರ ದೂರವಾಣಿ ಕರೆ ಸ್ವೀಕರಿಸಲಿಲ್ಲ ೆಂಬ ಕಾರಣಕ್ಕಾಗಿ ವರ್ಗಾವಣೆಗೊಂಡ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. 

ಇದೀಗ ಅವರು ದಿಢೀರನೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ರಾಜಿನಾಮಕ್ಕೆ ಕಾರಣ ಗೊತ್ತಾಗಿಲ್ಲ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಿಬ್ಬಂದಿ ಮೂಲಕ ರಾಜೀನಾಮೆ ಪತ್ರ ಕಳುಹಿಸಿಕೊಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಚೇತನ್, ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಲಾಗಿದೆ ಎಂಬುವುದು ಗೊತ್ತಿಲ್ಲ. ಈ ಕುರಿತು ಸ್ಪಷ್ಟೀಕರಣ ಕೇಳಲು ಅನುಪಮಾ ಶೆಣೈ ಸಂಪರ್ಕಕ್ಕೆ ಸಿಗುತ್ತಿಲ್ಲ. ರಾಜೀನಾಮೆ ಪತ್ರವನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕೂಡ್ಲಿಗಿಯ ಅಂಬೇಡ್ಕರ್ ಭವನದ ಬಳಿ ರಾಜಕೀಯ ಪಕ್ಷವೊಂದರ ಪ್ರಭಾವಿ ನಾಯಕ ಪರವಾನಿಗೆ ಇಲ್ಲದೆ ಮದ್ಯದಂಗಡಿಯೊಂದಕ್ಕೆ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಇದರ ವಿರುದ್ಧ ದಲಿತ ಸಂಘಟನೆಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸದಂತೆ ಅನುಪಮಾ ಸೂಚನೆ ನೀಡಿದ್ದರು. ಅಲ್ಲದೆ, ಈ ಸಂಬಂಧ ಮೂವರನ್ನು ಬಂಧಿಸಿ ಅವರ ವಿರುದ್ಧ ಅಪರಾಧ ದಂಢಸಂಹಿತೆ ಸೆಕ್ಷನ್ 107ರಂತೆ ಪ್ರಕರಣ ದಾಖಲಿಸಿಕೊಂಡು ತಾಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸಿದ್ದರು. ಮೂವರ ಬಂಧನವನ್ನು ವಿರೋಧಿಸಿ ರಾಜಕೀಯ ಮುಖಂಡನ ಬೆಂಬಲಿಗರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆಗಳನ್ನು ನಡೆಸಿ, ಅವರ ವಿರುದ್ಧ ಧಿಕ್ಕಾರಗಳನ್ನು ಕೂಗಿದ್ದರು ಎನ್ನಲಾಗಿದೆ. ಇದರಿಂದಾಗಿ ಮನನೊಂದು ಅನುಪಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಖಂಡನೆ: ಅನುಪಮಾ ಶೆಣೈ ವ್ಯವಸ್ಥೆಯ ಕ್ರೂರ ಪರಿಸ್ಥಿತಿಗೆ ಬಲಿಯಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಅತ್ಯಂತ ದುರದೃಷ್ಟಕರ. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶ ಇದರಿಂದ ರವಾನೆಯಾಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆ ವಿಚಾರ ಗಮನಕ್ಕೆ ಬಂದಿಲ್ಲ
ಬೆಳಗ್ಗೆಯಿಂದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಆದುದರಿಂದ, ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಸಂಬಂಧ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ರಾಜೀನಾಮೆ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತೇವೆ.
-ಡಾ. ಜಿ.ಪರಮೇಶ್ವರ್, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News