ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ
ಬೆಂಗಳೂರು, ಜೂ.4: ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿಯ ದತ್ತಾಂಶದಲ್ಲಿ ಸೇರ್ಪಡೆಯಾಗದಿದ್ದರೂ ಅರ್ಹ ಹಾಗೂ ನೈಜ ಕುಟುಂಬಗಳನ್ನು ಆಯ್ಕೆ ಮಾಡಿ, ಉಜ್ವಲ ಯೋಜನೆಯ ಲಾಭವನ್ನು ವಿಸ್ತರಿಸಲು ರಾಜ್ಯ ಸರಕಾರಕ್ಕೆ ಅವಕಾಶ ದೊರಕಿಸಿ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಬರೆದಿರುವ ತನ್ನ ಪತ್ರದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಸಿದ್ದರಾಮಯ್ಯ ಅವರು ಆರ್ಥಿಕವಾಗಿ ದುರ್ಬಲರಾದ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯ ಕುರಿತಂತೆ ರಾಜ್ಯಕ್ಕೆ ಈವರೆಗೆ ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ಅಂತೆಯೇ, ಯಾವುದೇ ಗುರಿಯನ್ನೂ ನಿಗದಿಪಡಿಸಿಲ್ಲ. ಆದ್ದರಿಂದ, ರಾಜ್ಯ ಸರಕಾರವು ತನ್ನ ವ್ಯಾಪ್ತಿಯಲ್ಲಿರುವ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿಯ ದತ್ತಾಂಶದಲ್ಲಿ ಸೇರ್ಪಡೆಯಾಗಿರುವ ಕುಟುಂಬಗಳಿಗೆ ಮಾತ್ರ ಈ ಯೋಜನೆಯನ್ನು ವಿಸ್ತರಿಸಲು ಯೋಜಿಸಿರುವುದಾಗಿ ತಿಳಿದು ಬಂದಿದೆ. ಇದರಿಂದ ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿಯ ದತ್ತಾಂಶದಲ್ಲಿ ಇನ್ನೂ ಸೇರ್ಪಡೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಕಡು ಬಡ ಕುಟುಂಬಗಳು ಸೌಲಭ್ಯದಿಂದ ವಂಚಿತರಾಗಬಾರದು. ಅರ್ಹ ಕುಟುಂಬಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ನೈಜ ಫಲಾನುಭಗಳನ್ನು ಆಯ್ಕೆ ಮಾಡುವ ಅವಕಾಶ ರಾಜ್ಯ ಸರಕಾರಕ್ಕೆ ಇರಬೇಕು. ರಾಜ್ಯಕ್ಕೆ ಹಂಚಿಕೆಯಾಗುವ ಒಟ್ಟಾರೆ ಗುರಿಯಲ್ಲೇ ಇಂತಹ ಪ್ರಕರಣಗಳನ್ನು ಸರಿದೂಗಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.