ಚುನಾವಣೆ ಮುಂದೂಡಿಕೆಗೆ ಆಸ್ಕರ್ ವಿರೋಧ
ಬೆಂಗಳೂರು, ಜೂ.4: ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿ ಮೃತಪಟ್ಟ ಸಂದರ್ಭದಲ್ಲಿ ಹೊರತುಪಡಿಸಿ, ಒಮ್ಮೆ ಘೋಷಣೆಯಾದ ಚುನಾವಣೆಯನ್ನು ಮುಂದೂಡುವ ಅವಕಾಶಗಳಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಅಭ್ಯರ್ಥಿ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಖಾಸಗಿ ಚಾನೆಲ್‌ವೊಂದು ಕುಟುಕು ಕಾರ್ಯಾಚರಣೆಯಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಚುನಾವಣೆ ಮುಂದೂಡುವ ಪ್ರಯತ್ನ ನಡೆದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಒಮ್ಮೆ ಚುನಾವಣೆ ಘೋಷಣೆಯಾದರೆ ಅದನ್ನು ಬದಲಾಯಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಒಂದು ವೇಳೆ ಅಭ್ಯರ್ಥಿ ಮೃತಪಟ್ಟಾಗ ಮಾತ್ರ ಚುನಾವಣೆ ಮುಂದೂಡಲು ಅವಕಾಶವಿದೆ. ಪ್ರಸ್ತುತ ಅಂತಹ ಯಾವುದೇ ಸಂದರ್ಭ ಎದುರಾಗಿಲ್ಲ. ಹಾಗಾಗಿ ಚುನಾವಣೆ ಮುಂದೂಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ನಾನೂ ಅಭ್ಯರ್ಥಿಯಾಗಿರುವುದರಿಂದ ಖಾಸಗಿ ಚಾನೆಲ್ ನಡೆಸಿದ ವೋಟಿಗಾಗಿ ನೋಟು ಕುಟುಕು ಕಾರ್ಯಾಚರಣೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಯಸುವುದಿಲ್ಲ. ನನ್ನ ಹೇಳಿಕೆಗಳು ಮತದಾರರಾದ ಶಾಸಕರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ನಾನು ಹೆಚ್ಚು ಹೇಳಲಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಚುನಾವಣೆಯಲ್ಲಿ ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಪಕ್ಷದ ತೀರ್ಮಾನವಾಗಿತ್ತು. ಅದಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.