ಪರಿಸರ ರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ : ಸಿದ್ದರಾಮಯ್ಯ
ಬೆಂಗಳೂರು.ಜೂ.5:ಪರಿಸರ ರಕ್ಷಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ.ಜಾಗತಿಕ ತಾಪಮಾನ ಹೆಚ್ಚಳ, ಕಾಡುನಾಶ, ಸಸಿ, ಪ್ರಾಣಿಪ್ರಭೇಧಗಳ ಅಳಿವು ಇವು ಪರಿಸರಕ್ಕೆ ಮಾರಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅರಣ್ಯ ಮತ್ತು ಜೀವಿ ಪರಿಸ್ಥಿತಿ ಇಲಾಖೆ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಇಲಾಖೆ ಸಹಯೋಗದಲ್ಲಿ ಇಂದು ಕಂಠೀರವ ಒಳಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ 2016 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಡನ್ನುಉಳಿಸಿ ಬೆಳೆಸಬೇಕು.ಕಾಡಿನ ವಿಸ್ತೀರ್ಣ 1/3 ರಷ್ಟುಇರಬೇಕಾಗಿದ್ದು, ಶೇಕಡ 13 ರಷ್ಟು ಕಡಿಮೆಯಾಗಿವೆ.ನಮ್ಮ ಬಜೆಟ್‌ನಲ್ಲಿ 8 ಕೋಟಿ ಗಿಡಗಳನ್ನುನೆಡಲು ಅನುಮೋದನೆ ನೀಡಲಾಗಿದೆ. ವಾಯುಮಾಲಿನ್ಯದಿಂದಾಗಿ ಆಸ್ತಮಾ ಮುಂತಾದ ಕಾಯಿಲೆಗಳು ಬರುತ್ತಿದ್ದು, ನಮ್ಮ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಬೇಕೆಂದು ಅವರು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅರಣ್ಯ ಸಚಿವರಾದ ಬಿ. ರಮಾನಾಥ ರೈ, ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ನಮಗೆ ಕಾಳಜಿ ಅತ್ಯಗತ್ಯ.ಎಲ್ಲರಲ್ಲೂ ಪರಿಸರದ ಬಗ್ಗೆ ಜಾಗೃತಿ ಉಂಟಾಗಬೇಕು.ಸರ್ಕಾರ ಬಜೆಟ್‌ನಲ್ಲಿ 8 ಕೋಟಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಮುಂದಿನ ತಿಂಗಳ ಪ್ರಾರಂಭದಲ್ಲಿ ಮುಖ್ಯಮಂತ್ರಿಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಲಕ್ಷ್ಮಣ್ ಅವರು ಹಸಿರು ಪರಿಸರದ ಬಗ್ಗೆ ಸರ್ವರಿಗೂ ಅರಿವು ಮೂಡಿಸುವ ಕಾರ್ಯಕ್ರಮನಡೆಯಬೇಕು.ಅರಣ್ಯ ನಾಶ, ತಾಪಮಾನ ಏರಿಕೆ, ಆಹಾರ ನಷ್ಟದಿಂದ ಹಲವು ಸಮಸ್ಯೆಗಳು ಉದ್ಭವಿಸಲಿದೆ. ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ 2015-16 ನೇ ಸಾಲಿನ ಪರಿಸರ ಪ್ರಶಸ್ತಿಯನ್ನು 3 ಜನರಿಗೆ ನೀಡಿ ಗೌರವಿಸಲಾಯಿತು.ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಡಿಬಂಡೆ ತಾಲ್ಲೂಕಿನಗುಂಪು ಮರದ ಆನಂದ್ ಎಂದೇ ಹೆಸರುವಾಸಿಯಾದ ಆನಂದ್ ಕುಮಾರ್, ಟಿ. ನರಸೀಪುರದ ಡಾ: ಚಂದ್ರ, ಹುಬ್ಬಳ್ಳಿಯ ಲಿಂಗರಾಜು ಪ್ರಶಸ್ತಿ ಪುರಸ್ಕೃತರು.ಅಲ್ಲದೆ 3 ಸಂಸ್ಥೆಗಳಾದ ಹಸಿರುದಳ–ತ್ಯಾಜ್ಯ ನಿರ್ವಹಣೆ, ಕಾಳಿ ಹುಲಿ ಸಂರಕ್ಷಣೆ ಪ್ರದೇಶ, ದಾಂಡೇಲಿ, ಹುಲಗಿಯ ಗ್ರಾಮಪಂಚಾಯತ್ ಕೊಪ್ಪಳಕ್ಕೆ ಸಹ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪರಿಸರ ಜಾಥಾ, ಸೈಕಲ್ ಜಾಥಾ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ “ಪರಿಸರ ವಾಹಿನಿ” ಹಾಗೂ “ದಿ ನೇಚರ್” ನಿಯತಕಾಲಿಕೆಗಳನ್ನು ಬಿಡುಗಡೆ ಮಾಡಲಾಯಿತು.ನಮ್ಮ ನಡೆ ವನ್ಯ ಜೀವಿ ಸಂರಕ್ಷಣೆ ಕಡೆಗೆಎಂಬ ಧ್ಯೇಯ ವಾಕ್ಯದೊಂದಿಗೆ ಪರಿಸರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಸಚಿವರಾದ ಆರ್. ರೋಷನ್ ಬೇಗ್, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಉಗ್ರಪ್ಪ, ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ, ಅರಣ್ಯ, ಪರಿಸರ ಹಾಗೂ ಜೀವಿ ಪರಿಸರ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ರಾಮಚಂದ್ರ, ಅಪರ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ. ವಿಜಯಭಾಸ್ಕರ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶಂಕರ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.