ಹಾಸನ: ಆಲದ ಮರದ ಕೊಂಬೆ ಬಿದ್ದು ಮನೆಗೆ ಹಾನಿ
Update: 2016-06-05 17:46 IST
ಹಾಸನ, ಜೂ. 5: ಬೃಹತ್ ಆಲದ ಮರವೊಂದರ ಕೊಂಬೆ ಮನೆ ಮೇಲೆ ಬಿದ್ದು ಮನೆಗೆ ಹಾನಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಹಳೆ ಮಟನ್ ಮಾರ್ಕೆಟ್ ಎದುರು, ನೂತನ ಕೃಷ್ಣ ಆಸ್ಪತ್ರೆಯ ಮುಂಭಾಗ ಇರುವ ಹಳೆಯ ಕಾಲದ ಬೃಹತ್ ಆಲದ ಮರದ ಕೊಂಬೆಯು ಮುಹಮ್ಮದ್‌ಫಯಾಝ್ ಎಂಬುವರ ಮನೆ ಮೇಲೆ ಬಿದ್ದ ಪರಿಣಾಮ ಮನೆಯ ಗೋಡೆ ಹಾಗೂ ಒಳಗಿದ್ದ ವಸ್ತುಗಳಿಗೆ ಹಾನಿ ಉಂಟಾಗಿದೆ. ಈ ವೇಳೆ ಒಳಗೆ ಇದ್ದವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಮುಹಮ್ಮದ್ ಫಯಾಝ್ ಹಾಗೂ ಇಲ್ಲಿನ ನಿವಾಸಿಗಳು ಈ ದೈತ್ಯಾಕಾರದ ಕೊಂಬೆಗಳು ಯಾವಾಗ ಬೇಕಾದರೂ ಬೀಳುವ ಸಂಭವ ಇದೆ ಎಂದು ನಗರಸಭೆಗೆ ಮನವಿ ಮಾಡಿದ್ದರೂ ಇದುವರೆಗೂ ಸ್ಪಂದಿಸಿಲ್ಲ ಎಂದು ದೂರಿದರು. ಮುಂದೆ ಮರ ಬಿದ್ದು ಅಪಾಯ ಸಂಭವಿಸಿದರೇ ಇದಕ್ಕೆ ನಗರಸಭೆಯೇ ಹೊಣೆ ಎಂದು ತಮ್ಮ ಆಕ್ರೋಶ ಕೂಡ ವ್ಯಕ್ತಪಡಿಸಿದರು.