ಕೆಎಚ್‌ಬಿ ಬಡಾವಣೆಗೆ ಮೂಲಭೂತ ಸೌಕರ್ಯ: ಸಚಿವ ಎ.ಮಂಜು ಭರವಸೆ

Update: 2016-06-05 12:50 GMT

ಹಾಸನ, ಜೂ.5: ಕರ್ನಾಟಕ ಹೌಸಿಂಗ್ ಬೋರ್ಡ್‌ನಲ್ಲಿ ಅವಶ್ಯಕವಾಗಿರುವ ಮೂಲಭೂತ ಸೌಕರ್ಯವನ್ನು ಒದಗಿಸಿದ ಬಳಿಕ ನಿರ್ವಹಣೆಗಾಗಿ ನಗರಸಬೆಗೆ ಜವಬ್ಧಾರಿ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎ. ಮಂಜು ತಿಳಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಕರ್ನಾಟಕ ಹೌಸಿಂಗ್ ಬೋರ್ಡ್‌ನಲ್ಲಿರುವ ಸಮಸ್ಯೆಯ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವರು, ಈ ಬಾಗದಲ್ಲಿ ಅವಶ್ಯಕವಾಗಿ ಬೇಕಾಗಿರುವ ನೀರಿನ ವ್ಯವಸ್ಥೆ ಕುರಿತು ಮಾತನಾಡಿ, 117 ಕೋಟಿ ವೆಚ್ಚದಲ್ಲಿ ಈಗಾಗಲೇ 3ನೆ ಹಂತದ ನೀರಿನ ಯೋಜನೆಗೆ ಬಿಡುಗಡೆಗೆ ಸಿದ್ಧವಾಗಿದೆ. ಈ ಸ್ಥಳದಲ್ಲಿ ಪೊಲೀಸ್ ಬೀಟ್ ಮಾಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನುಡಿದರು.

ಯಾವುದೇ ಅಭಿವೃದ್ಧಿ ಕೆಲಸ ಫಲಕಾರಿಯಾಗಬೇಕಾದರೆ ಸುತ್ತಮುತ್ತಲ ನಿವಾಸಿಗಳ ಸಹಕಾರವು ಅಗತ್ಯ ಎಂದು ಸಲಹೆ ನೀಡಿದರು. ಉತ್ತಮ ಪರಿಸರ ಬರಬೇಕಾದರೆ ಹೆಚ್ಚಿನ ಗಿಡವನ್ನು ನೆಟ್ಟು ನಿರ್ವಹಣೆ ಮಾಡಬೇಕು. ಅದರಲ್ಲೂ ಪಕ್ಷಿಗಳಿಗೆ ಆಹಾರ ಒದಗಿಸುವ ಗಿಡ ನೆಟ್ಟರೆ ಅದಕ್ಕೆ ಹಣ್ಣು-ಹಂಪಲು ಲಭಿಸುತ್ತದೆ ಎಂದು ಕಿವಿಮಾತು ಹೇಳಿದ ಅವರು ಅದರ ಪಾಲನೆಯನ್ನು ನಿವಾಸಿಗಳು ಮಾಡಬೇಕು ಎಂದರು.ಮನೆಯಲ್ಲಿ ತರಕಾರಿ ತ್ಯಾಜ್ಯವನ್ನು ಪ್ರತ್ಯೇಕ ಮಾಡಿ ಒಂದು ಕಡೆ ಸಂಗ್ರಹಿಸಿ ಅದರ ಗೊಬ್ಬರವನ್ನು ಗಿಡಗಳಿಗೆ ಹಾಕಿದರೇ ಒಳ್ಳೆಯದು ಎಂದು ಹೇಳಿದರು.

ಕೆಎಚ್‌ಬಿ ಬಡಾವಣೆ ಸಂಘದ ಅಧ್ಯಕ್ಷ ಗೋಪಾಲ್ ಮಾತನಾಡಿ, ಕರ್ನಾಟಕ ಹೌಸಿಂಗ್ ಬೋರ್ಡ್‌ನಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಮೂಲಭೂತ ಸಮಸ್ಯೆಗಳಾದ, ನೀರಿನ ಸಮಸ್ಯೆ, ಸಮರ್ಪಕ ರಸ್ತೆ, ವಿದ್ಯುತ್ ಸಮಸ್ಯೆ ಜೊತೆಗೆ ಸಂಜೆಯಾದರೇ ಈ ಭಾಗದಲ್ಲಿ ಯಾವ ಹೆಣ್ಣು ಮಕ್ಕಳೂ ಓಡಾಡಲು ಹೆದರುತ್ತಾರೆ. ಅನೈತಿಕ ಚಟುವಟಿಕೆಯ ತಾಣವಾಗಿದೆ. ಈ ಬಗ್ಗೆ ನಗರಸಭೆಗೆ ಕೇಳಿದರೆ ನಮಗೆ ಸೇರಿಲ್ಲ ಎನ್ನುತ್ತಾರೆ. ಕೆಎಚ್‌ಬಿ ಅವರಿಗೆ ಕೇಳಿದರೇ ಇತ್ತ ಕಡೆ ತಿರುಗಿ ನೋಡುವುದಿಲ್ಲ ಎಂದು ತಮ್ಮ ಅಲಲು ತೋಡಿಕೊಂಡರು.

ಇದೆ ವೇಳೆ ಕೆಎಚ್‌ಬಿ ಬಡಾವಣೆ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಸ್ಯೆಗಳ ಮನವಿಯನ್ನು ಲಿಖಿತ ಮೂಲಕ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಗಣೇಶ್ ಭಟ್, ಬ್ರಹ್ಮಕುಮಾರಿ ಸಮಾಜದ ಸವಿತಾ, ಬಾಬಣ್ಣ, ಕಾಂಗ್ರೆಸ್ ಮುಖಂಡರಾದ ಸತ್ಯಮಂಗಲದ ಮೋಹನ್ ಕುಮಾರ್, ರವೀಂದ್ರಕುಮಾರ್, ತಿಮ್ಮರಾಜು ಶೆಟ್ಟಿ, ವೀರಭದ್ರಪ್ಪ, ನಂಜಪ್ಪ, ಶಿವಣ್ಣ, ಶಂಕರಯ್ಯ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News