ಗ್ರಾಮ ಹಸಿರೀಕರಣ ಅಭಿಯಾನಕ್ಕೆ ಚಾಲನೆ
ಕುಶಾಲನಗರ, ಜೂ.5: ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಸೋಮವಾರಪೇಟೆ ತಾಲೂಕು ಪಂಚಾಯತ್ ಸಹಯೋಗದಲ್ಲಿ ತೊರೆನೂರು ಗ್ರಾಪಂ ವತಿಯಿಂದ ತೊರೆನೂರು ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಗ್ರಾಮ ಹಸಿರೀಕರಣ ಅಭಿಯಾನದ ಸಪ್ತಾಹ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಹಸಿರೀಕರಣ ಅಭಿಯಾನದ ಅಂಗವಾಗಿ ಸರಕಾರಿ ಶಾಲೆಯ ಇಕೋ ಕ್ಲಬ್ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ 2 ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಾವು ಪರಿಸರದಲ್ಲಿ ಹೆಚ್ಚು ಗಿಡ-ಮರಗಳನ್ನು ಬೆಳೆಸುವ ಮೂಲಕ ಹಸಿರು ಕ್ರಾಂತಿಗೆ ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ರೈತರು ತಮ್ಮ ಜಮೀನಿನಲ್ಲಿ ಭೂಮಿಯ ಅಂತರ್ಜಲ ಹೆಚ್ಚಿಸುವ ಹಲಸು, ಮಾವು, ಹೊಂಗೆ ಮತ್ತಿತರ ಗಿಡ-ಮರಗಳನ್ನು ಬೆಳೆಸುವ ಮೂಲಕ ಮಣ್ಣಿನ ರಕ್ಷಣೆಯೊಂದಿಗೆ ಪರಿಸರ ಸಂರಕ್ಷಿಸಬೇಕು. ಪರಿಸರದಲ್ಲಿ ಹಸಿರು ಉಳಿದರೆ ಮಾತ್ರ ಪರಿಸರ ಉಳಿಸಲು ಸಾಧ್ಯ, ಆದ್ದರಿಂದ ಪ್ರತಿಯೊಬ್ಬರೂ ಜೀವಿ-ಸಂಕುಲದ ಸಂರಕ್ಷಣೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ವಿಶ್ವ ಪರಿಸರ ದಿನಾಚರಣೆಯ ಮಹತ್ವ ಕುರಿತು ಆಶಯ ಭಾಷಣ ಮಾಡಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ನಾವು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯೊಂದಿಗೆ ಜೀವಿ-ವೈವಿಧ್ಯ ಸಂಪತ್ತನ್ನು ಸಂರಕ್ಷಿಸದಿದ್ದಲ್ಲಿ ಭವಿಷ್ಯತ್ತಿನಲ್ಲಿ ಜಲಕ್ಷಾಮ ಎದುರಿಸಬೇಕಾದ ಅಪಾಯವಿದೆ. ಈ ದಿಸೆಯಲ್ಲಿ ನಾವು ಸಂಘಟಿತರಾಗಿ ನೈಸರ್ಗಿಕ ಸಂಪನ್ಮೂಲಗಳಿಗೆ ಧಕ್ಕೆ ಬರದಂತೆ ಜಾಗೃತಿ ವಹಿಸುವ ಮೂಲಕ ಪರಿಸರ ಸಂರಕ್ಷಣಾ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಬೇಕಿದೆ ಎಂದರು.
ಗ್ರಾಪಂ ಕಚೇರಿಯ ಆವರಣದಲ್ಲಿ ಸಸಿನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಜಿಪಂ ಸದಸ್ಯ ಎಚ್.ಆರ್.ಶ್ರೀನಿವಾಸ್ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಕಾರ್ಯಕ್ರಮಗಳಿಗೆ ಸಹಕರಿಸಿದರೆ ಸುಂದರ ಪರಿಸರ ನಿರ್ಮಿಸಲು ಸಾಧ್ಯ. ರೈತರು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚು ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದರು.
ಪರಿಸರ ಜಾಥಾಕ್ಕೆ ಗ್ರಾಪಂ ಅಧ್ಯಕ್ಷ ಕೆ.ಬಿ.ದೇವರಾಜ್‌ಚಾಲನೆ ನೀಡಿದರು. ತಾಪಂ ಸದಸ್ಯ ಜಯಣ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಪಿ.ಚಂದ್ರಶೇಖರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಸಹಾಯಕ ನಿರ್ದೇಶಕಡಿ.ಬಿ.ಸುನೀಲ್‌ಕುಮಾರ್, ಗ್ರಾಪಂ ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ, ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಪಾಂಡುರಂಗ, ಗ್ರಾಪಂ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಗ್ರಾಪಂ ಪಿಡಿಒ ಸಂತೋಷ್‌ಕುಮಾರ್ ಸ್ವಾಗತಿಸಿದರು. ಸರಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಬಿ.ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಪಂಸದಸ್ಯ ಪಿ.ಡಿ.ರವಿ ವಂದಿಸಿದರು. ವಿದ್ಯಾರ್ಥಿ ಟಿ.ಯು.ಪುನೀತ್ ಕುಮಾರ್ ಪರಿಸರ ಗೀತೆ ಹಾಡಿದನು.