ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಡುವುದು ಆವಶ್ಯ: ನಿವೃತ್ತ ಡಿಸಿ ವೈ. ಸದಾಶಿವ
ಕಾರವಾರ, ಜೂ.5: ಅಭಿವೃದ್ಧಿಯ ಕಾರಣದಿಂದಾಗಿ ಲಕ್ಷಾಂತರ ಮರ ಗಿಡಗಳು ನಾಶವಾಗುತ್ತಿದೆ. ಮನೆ, ಶಾಲೆ, ಕಚೇರಿ ಹಾಗೂ ಬೀದಿ ಬೀದಿಗಳಲ್ಲಿ ಗಿಡಗಳನ್ನು ನೆಡುವುದು ಅತ್ಯವಶ್ಯಕವಾಗಿದೆ ಎಂದು ನಿವೃತ್ತ ವಿಶೇಷ ಜಿಲ್ಲಾಧಿಕಾರಿ ವೈ. ಸದಾಶಿವ ಹೇಳಿದರು.
ಅವರು ಆಝಾದ್ ಯೂತ್ ಕ್ಲಬ್, ಕರಾವಳಿ ಕಾವಲು ಪಡೆಯ ಜಂಟಿ ಆಶ್ರಯದಲ್ಲಿ ಕೋಡಿಭಾಗದ ಕರಾವಳಿ ಕಾವಲು ಪಡೆ ಠಾಣೆಯ ಎದುರು ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪರಿಸರ ನಾಶದಿಂದ ಬೆಲೆ ಏರಿಕೆಯ ಜೊತೆಗೆ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಎಲ್ಲದಕ್ಕೂ ಪರಿಹಾರವಾಗಿ ಪರಿಸರ ಸಂರಕ್ಷಣೆ ಅಗತ್ಯವಾಗಿದೆ. ಅದಕ್ಕಾಗಿ ಎಲ್ಲರೂ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು. ಮುಖ್ಯ ಅತಿಥಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಎಮ್.ರಾಣೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದಾಗ ಈ ವನಮಹೋತ್ಸವ ಕಾರ್ಯಕ್ರಮವು ಅವಶ್ಯಕ ಕಾರ್ಯಗಳಲ್ಲಿ ಒಂದಾಗಿದೆ. ಎಲ್ಲರೂ ಇದನ್ನು ಪಾಲಿಸಿದರೆ ನಶಿಸಿ ಹೋದ ಮರಗಳನ್ನು ಪುನಃ ಪಡೆಯ ಬಹುದು ಎಂದು ಹೇಳಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಜೀರ್ ಅಹ್ಮದ್ ಯು. ಶೇಖ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷದ ಘೋಷ ವಾಕ್ಯವು ‘ವನ್ಯ ಜೀವಿಗಳ ಅಕ್ರಮ ಸಾಗಾಣಿಕೆ ತಡೆ’ ಎಂದಾಗಿದೆ. ಈ ವರ್ಷವನ್ನು ವನ್ಯ ಜೀವಿಗಳ ಅಕ್ರಮ ವ್ಯಾಪಾರದ ಸಂವೇದನಾ ವರ್ಷವೆಂದು ಸಹ ಘೋಷಿಸಲಾಗಿದೆ. ಅದರಂತೆ ನಾವೆಲ್ಲರೂ ಪರಿಸರದ ಜೊತೆಗೆ ಕಾಡನ್ನು ಹಾಗೂ ಕಾಡು ಪ್ರಾಣಿಗಳನ್ನೂ ರಕ್ಷಿಸಬೇಕಾಗಿದೆ. ಪರಿಸರವು ನಮ್ಮ ಆಸ್ತಿಯಾದ್ದರಿಂದ ಗಿಡಗಳನ್ನು ನೆಡುವುದರ ಜೊತೆಗೆ ನೀರು ಹಾಕಿ ಅದನ್ನು ಪೋಷಿಸುವುದು ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾವು, ಗೇರು, ಹಲಸು, ನೇರಳೆ, ಮುರುಗಲು ಇತ್ಯಾದಿ ಜಾತಿಯ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮವನ್ನು ಆಝಾದ್ ಯೂತ್ ಕ್ಲಬ್‌ನ ಕೋಶಾಧ್ಯಕ್ಷ ಮುಹಮ್ಮದ್ ಉಸ್ಮಾನ್ ಶೇಖ್‌ರವರು ಸಂಘಟಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರ ಯುವ ಪ್ರಶಸ್ತಿ ವಿಜೇತ ಮುಹಮ್ಮದ್ ಹಸನ್ ಶೇಖ್, ಕಸಾಪ, ಸದಸ್ಯೆ ಫೈರೋಝಾ ಬೇಗಂ ಎನ್.ಶೇಖ್, ಎ.ಎಸ್.ಐ ವಿ.ಎಮ್.ನಾಯ್ಕ ಮತ್ತು ಜಿ.ಎಸ್.ನಾಯ್ಕ, ಸಂತೋಷ್ ನಾಯ್ಕ, ಪ್ರಶಾಂತ್ ಸಾವಂತ, ಸಾಯಿನಾಥ್ ಹರಿಕಂತ್ರ, ಸಂತೋಷ ರಾಣೆ, ಉಲ್ಲಾಸ್ ನಾಯ್ಕ, ದಿನೇಶ್ ನಾಯ್ಕ, ಅಮೋಲ್ ಕಾಣ್ಕೂಣ್ಕರ್ ಮತ್ತಿತರರು ಉಪಸ್ಥಿತರಿದ್ದ್ದರು.