ಎಫ್‌ಡಿಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಮರು ಪರೀಕ್ಷೆಗೆ ಶೆಟ್ಟರ್ ಆಗ್ರಹ
ಕಾರವಾರ, ಜೂ.5: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಕೂಡಲೇ ಮರುಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.
ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾ. ನಾಗರಾಜ ಪರ ಜಗದೀಶ್ ಶೆಟ್ಟರ್ ಪ್ರಚಾರ ನಡೆಸ ಬಳಿಕ ನಗರಕ್ಕೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿದ ಅವರು, 2015ರಲ್ಲಿ ನಡೆದ ಎಫ್‌ಡಿಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಪಿಯುಸಿಯ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆಯಂತೆ ಸೋರಿಕೆಯಾಗಿದೆ. ಇದರಿಂದ ಲಕ್ಷಾಂತರ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ.ಈಗಾಗಲೇ ಆಯ್ಕೆಗೊಂಡವರ ಪಟ್ಟಿಯನ್ನು ಬಿಟ್ಟಿದ್ದು, ದಾಖಲಾತಿಗಳ ಪರಿಶೀಲನೆಗೆ ಕರೆಯಲಾಗಿದೆ. ಕೂಡಲೇ ಇದನ್ನು ಕೈಬಿಟ್ಟು ಮರುಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಕುಂದಾಪುರ ತಾಲೂಕು ಗಂಗೊಳ್ಳಿ ಬಂದರು ಕಾಮಗಾರಿಯಲ್ಲಿ ಸಚಿವ ಬಾಬೂರಾವ್ ಚಿಂಚನಸೂರ್ ಲಂಚ ಪಡೆದಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋ ಕೂಡ ಬಿಡುಗಡೆ ಮಾಡಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂಜರಿಯುತ್ತಿದ್ದ ಚಿಂಚನಸೂರು ಮೂರು ದಿನಗಳ ನಂತರ ಆರೋಪ ಅಲ್ಲಗಳೆದಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಇದರಿಂದ ತಿಳಿದು ಬರುತ್ತದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು. ಅಲ್ಲದೆ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯಸಭಾ ಚುನಾವಣೆಗೆ ಮತ ಹಾಕಲು ಹಣದ ವ್ಯವಹಾರ ನಡೆದಿರುವುದು ದುರದೃಷ್ಟಕರ ಸಂಗತಿ. ಇವರ ಭ್ರಷ್ಟ ರಾಜಕಾರಣದಿಂದ ಶಾಸಕ ಸಚಿವರು ತಲೆತಗ್ಗಿಸುವಂತಾಗಿದೆ. ಸ್ಟಿಂಗ್ ಆಪರೇಶನ್ ಮೂಲಕ ಶಾಸಕರು ಹಣಕ್ಕೆ ಬೇಡಿಕೆ ಇಟ್ಟ ವಿಚಾರ ಬಹಿರಂಗವಾಗಿದ್ದು, ಸದ್ಯ ಚುನಾವಣಾ ಆಯೋಗ ಚುನಾವಣೆ ಮುಂದೂಡಿದರೂ ಅಭ್ಯಂತರವಿಲ್ಲ. ಆದರೆ ಈ ಎರಡು ಪ್ರಕರಣಗಳ ಬಗ್ಗೆ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ವಕ್ತಾರ ನಾಗರಾಜ ಜೋಶಿ, ಮಾಜಿ ಶಾಸಕ ಗಂಗಾಧರ ಭಟ್ಟ, ಪ್ರಮುಖರಾದ ಪ್ರಸಾದ್ ಕಾರವಾರಕರ್, ಗಣಪತಿ ಉಳ್ವೇಕರ್, ಮನೋಜ ಭಟ್ಟ, ವಿವೇಕಾನಂದ ಬೈಕರ್ ಮತ್ತಿತರರಿದ್ದರು.