ಮಕ್ಕಳ ಸಾಹಿತ್ಯ ಹಿರಿಯರ ಮನ ಸೆರೆ ಹಿಡಿಯುವಲ್ಲಿ ಯಶಸ್ವಿ: ಡಾ. ನಾ. ಡಿಸೋಜಾ
ಸಾಗರ, ಜೂ.5: ಸಾಹಿತ್ಯ ಕ್ಷೇತ್ರದ ಬುದ್ಧಿಜೀವಿಗಳು ಮಕ್ಕಳ ಸಾಹಿತ್ಯ ಏಕೆ ಬೇಕು ಎಂದು ಪ್ರಶ್ನಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಮಕ್ಕಳ ಸಾಹಿತ್ಯ ಕೇವಲ ಮಕ್ಕಳಿಗೆ ಮಾತ್ರವಲ್ಲದೆ, ದೊಡ್ಡವರ ಮನಸ್ಸನ್ನು ಸಹ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎನ್ನುವುದನ್ನು ಪ್ರಶ್ನಿಸುವವರು ಅರ್ಥ ಮಾಡಿಕೊಳ್ಳಬೇಕು ಎಂದು ಸಾಹಿತಿ ಡಾ. ನಾ. ಡಿಸೋಜಾ ಹೇಳಿದರು.
ಇಲ್ಲಿನ ನರಹರಿ ಸದ್ಗುರು ಹಿಂದೂಸ್ಥಾನಿ ಸಂಗೀತ ಶಾಲೆಯಲ್ಲಿ ಶನಿವಾರ ಜಿಲ್ಲಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಡಾ. ಎಚ್.ಗಣಪತಿಯಪ್ಪಸೇವಾ ಟ್ರಸ್ಟ್, ಸಹೃದಯ ಬಳಗ ಹಾಗೂ ವೀತರಾಗಾಯ ಟ್ರಸ್ಟ್‌ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಿಂಗಳ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ, ಲೇಖಕ ವಿ. ಗಣೇಶ್ ಅವರು ಬರೆದಿರುವ ‘ಅತಿ ಆಸೆ ಗತಿಗೇಡು’ ಮಕ್ಕಳ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಮಕ್ಕಳಿಗೋಸ್ಕರ ಹುಟ್ಟಿದ್ದ ಪಂಚ ತಂತ್ರದಂತಹ ಕಥೆಗಳು ವಿಶ್ವದ ಅನೇಕ ಭಾಷೆಗಳಲ್ಲಿ ಪ್ರಕಟಗೊಂಡು ಪ್ರಸಿದ್ಧಿಗೊಂಡಿದೆ. ಇದು ಮಕ್ಕಳ ಸಾಹಿತ್ಯ ಕೃತಿಯ ಬಗ್ಗೆ ಜನರಿಗೆ ಇರುವ ಆಸಕ್ತಿಯನ್ನು ತೋರಿಸುತ್ತದೆ. ಮಕ್ಕಳಿಗೆ ಎಂತಹ ಸಾಹಿತ್ಯ ಕೊಡಬೇಕು ಎನ್ನುವ ಕುರಿತು ಲೇಖಕರು ಚಿಂತನೆ ನಡೆಸಬೇಕು. ನಮ್ಮಲ್ಲಿರುವ ಮಗುವಿನ ಮನಸ್ಸು ಹಾಗೂ ಮುಗ್ದತೆಯನ್ನು ಕಾಪಾಡುವ ವಿಶೇಷವಾದ ಶಕ್ತಿ ಮಕ್ಕಳ ಸಾಹಿತ್ಯ ಕೃತಿಗಳಿಗೆ ಇದೆ ಎಂದರು.
ದೊಡ್ಡವರಿಗೆ ಬೇಕಾದ ಸಾಹಿತ್ಯ ಕೃತಿಗಳನ್ನು ಸುಲಭವಾಗಿ ರಚಿಸಬಹುದು. ಆದರೆ ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸುವುದು ಸವಾಲಿನ ಕೆಲಸವಾಗಿರುತ್ತದೆ. ಕಸಾಪ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಮಾತನಾಡಿರು. ವೀತರಾಗ ಟ್ರಸ್ಟ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಕಾಶ್ ಮತ್ತು ಅವಿನಾಶ್ ಪ್ರಾರ್ಥಿಸಿದರು. ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿದರು. ಕೃತಿಕಾರ ವಿ. ಗಣೇಶ್ ಪ್ರಾಸ್ತಾವಿಕ ಮಾತನಾಡಿದರು. .