‘ಪ್ರತಿಭಾವಂತರಿಗೆ ಅಭಿನಂದನೆ ಇತರರಿಗೆ ಪ್ರೇರಣೆ ನೀಡಲಿದೆ: ಶಾಸಕಿ ಶಾರದಾ ಪೂರ್ಯಾನಾಯ್ಕ
ಶಿವಮೊಗ್ಗ, ಜೂ. 5: ಸಮಾಜದಲ್ಲಿ ಯಾವುದೇ ವರ್ಗದ ಸಾಧಕರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಗೌರವಿಸಿದಾಗ ಇತರರು ಇದರಿಂದಾಗಿ ಪ್ರೇರಣೆ ಹೊಂದಿ ಸಮಾಜದಲ್ಲಿ ಗುರುತಿಸುವ ಸ್ಥಾನಮಾನ ಹೊಂದಲು ಸಾಧ್ಯವಾಗಲಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದರು.
ಅವರು ಸಿಂಧೂ ಬಂಜಾರ ಟ್ರಸ್ಟ್ ವತಿಯಿಂದ ನಗರದ ಬಂಜಾರ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಗೆ ಖ್ಯಾತಿ ತಂದ ವೈದ್ಯ ಡಾ. ಲಿಂಗರಾಜ ನಾಯ್ಕ ಮತ್ತು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎ.ಸಣ್ಣರಾಮ ಅವರಿಗೆ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಆದರೆ ಸಾಧಿಸುವ ಛಲ ಪ್ರತಿಯೊಬ್ಬರಲ್ಲೂ ಇರಬೇಕು. ಇಂದಿನ ಯುವ ಪೀಳಿಗೆ ಸಮಾಜದಲ್ಲಿ ತಮ್ಮ ಮಾದರಿ ಕೆಲಸಗಳಿಂದಲೇ ಗುರುತಿಸಿ ಕೊಂಡ ಆದರ್ಶ ಬದುಕನ್ನು ನಡೆಸಿದ ಹಿರಿಯರ ಮಾರ್ಗದರ್ಶನ ಅನುಸರಿಸಬೇಕೆಂದವರು ನುಡಿದರು. ವಾಸವಿರುವ ಸ್ಥಳದಲ್ಲೇ ದೊರೆಯಬಹುದಾದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮವಾಗಿ ಬದುಕುವ ಕಲೆಯನ್ನು ಎಲ್ಲರೂ ಅರಿತುಕೊಳ್ಳಬೇಕು.
ಸಹಕಾರ ಮನೋಭಾವ ಹೊಂದಿರಬೇಕು. ಪರಸ್ಪರರಲ್ಲಿ ಅನ್ಯೋನ್ಯತೆ ಇರಬೇಕು. ಇದರಿಂದಾಗಿ ಸಮಾಜದಲ್ಲಿ ಸಹಜವಾಗಿ ಸ್ಥಾನಮಾನಗಳು ಲಭ್ಯವಾಗಲಿವೆ ಎಂದರು.
ಇದೇ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಡಾ.ಲಿಂಗರಾಜನಾಯ್ಕ ಮಾತನಾಡಿ, ಶಿಕ್ಷಣ ಪಡೆಯುವ ಅವಧಿಯಲ್ಲಿ ನಮ್ಮ ಸಮಾಜದ ಹಿರಿಯರು, ಮನೆಯ ಸದಸ್ಯರು ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ನೆನಪಿಸಿಕೊಂಡರು. ಈ ಸಮಾಜದಿಂದ ಎಲ್ಲವನ್ನೂ ಪಡೆದ ನಾನೂ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಆಶಯ ಹೊಂದಿರುವುದಾಗಿ ಅವರು ತಿಳಿಸಿದರು.ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸಣ್ಣರಾಮ ಮಾತನಾಡಿದರು. ಈ ಸಂದರ್ಭದಲ್ಲಿ ಸಿಂಧೂ ಬಂಜಾರ ಟ್ರಸ್ಟ್ ವತಿಯಿಂದ ಸಾಧಕರಿಬ್ಬರಿಗೂ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಚಂದ್ರಾನಾಯ್ಕ, ತಮ್ಮಣ್ಣ ಕಾರಬಾರಿ, ಗಣೇಶ್, ಇಂದ್ರಾನಾಯ್ಕ, ಹನುಮಾನಾಯ್ಕ, ಜ್ಯೋತಿ ರಾಥೋಡ್, ಜಯಲಕ್ಷ್ಮೀಬಾಯಿ, ವಿಶ್ವನಾಥ ಡಾವೋ ಮುಂತಾದವರು ಉಪಸ್ಥಿತರಿದ್ದರು.