×
Ad

‘ಎತ್ತಿನ ಹೊಳೆ ಯೋಜನೆ’ ವಿರೋಧಿಸಿ ಛಾಯಾಚಿತ್ರ ಪ್ರದರ್ಶನ; ವೇದಿಕೆಯಲ್ಲಿ ಮಾತಿನ ಚಕಮಕಿ

Update: 2016-06-05 23:41 IST

ಬೆಂಗಳೂರು, ಜೂ. 5: ರಾಜ್ಯ ಸರಕಾರ ಎತ್ತಿನ ಹೊಳೆ ಯೋಜನೆಗೆ ಹಣ ನೀಡಿ ಕಾಮಗಾರಿಯನ್ನು ಆರಂಭಿಸಿರುವಾಗ ಈ ಯೋಜನೆಯನ್ನು ವಿರೋಧಿ ಸುವುದು ಸರಿಯಲ್ಲ ಎಂದು ನೀರಾವರಿ ತಜ್ಞ ನರಸಿಂಹಯ್ಯ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದ ಸುಧೀರ್ ಶೆಟ್ಟಿ ‘ಮರಗಳ ಮಾರಣ ಹೋಮ ಆಗಿದೆ’ ಎನ್ನುವುದಕ್ಕೆ ಇಲ್ಲಿರುವ ಛಾಯಾ ಚಿತ್ರಗಳೇ ಸಾಕ್ಷಿ ಎಂದು ಹೇಳಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ, ವಾಗ್ವಾದಕ್ಕೆ ಕಾರಣವಾಯಿತು.

ರವಿವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಬೆಂಗಳೂರು ಜನಜಾಗೃತಿ ಸಾಂಸ್ಕೃತಿಕ ಹಾಗೂ ಕಲಾವೇದಿಕೆ ಆಯೋಜಿಸಿದ್ದ ಮರಗಳ ಮಾರಣ ಹೋಮದ ಮೇಲೆ ಎತ್ತಿನ ಹೊಳೆ ಯೋಜನೆಯೇ? ಎಂಬ ಕರ್ನಾಟಕ ಬರದ ಮೇಲೆ ವಂಡರ್ ಕಣ್ಣೋಟ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ನಡೆದಾಗ ಈ ಮಾತಿನ ಚಕಮಕಿಯ ಘಟನೆ ನಡೆಯಿತು. ನೀರಾವರಿ ತಜ್ಞ ಹಾಗೂ ಎತ್ತಿನಹೊಳೆ ಯೋಜನೆ ರೂವಾರಿ ನರಸಿಂಹಯ್ಯ ಮಾತನಾಡಿ, ಮರಗಳ ಮಾರಣಹೋಮದ ಮೇಲೆ ಎತ್ತಿನಹೊಳೆ ಜಾರಿ ಕುರಿತಂತೆ ಚಿತ್ರ ಪ್ರದರ್ಶನ ಆಯೋಜಿಸಿರುವುದು ಯೋಜನೆಯನ್ನು ವಿರೋಧಿಸುತ್ತಿರುವವರು ಮಾಡು ತ್ತಿರುವ ಕುತಂತ್ರ. ಬಯಲುಸೀಮೆ ಭಾಗಗಳಿಗೆ ನೀರೊದಗಿಸುವ ಯೋಜನೆಯ ಬಗ್ಗೆ ಇಲ್ಲ ಸಲ್ಲದಆರೋಪ ಮಾಡಲಾಗುತ್ತಿದೆ. ಈ ಯೋಜನೆ ಬರುವ ಮಾರ್ಗ ಮಧ್ಯದಲ್ಲಿ ಮರಗಳ ಮಾರಣ ಹೋಮ ಆಗಿಲ್ಲ ಎಂದು ಛಾಯಾಚಿತ್ರ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸರಕಾರದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗೆ ಹಣ ನೀಡಿ ಕಾಮಗಾರಿಯನ್ನು ಆರಂಭಿಸಲಾಗಿದೆ.

ಈ ವರ್ಷದ ಅಂತ್ಯದೊಳಗೆ ಎತ್ತಿನ ಹೊಳೆಯನ್ನು ಕೋಲಾರ, ಚಿಕ್ಕಬಳ್ಳಾಪುರ ಭಾಗದ ಜಿಲ್ಲೆಗಳಿಗೆ ನೀರೊದಗಿಸುವ ಕಾರ್ಯ ಆರಂಭವಾಗಲಿದ್ದು, ಇದನ್ನು ಯಾರಿಂದ ಎಷ್ಟೇ ವಿರೋಧವಾದರೂ ಯೋಜನೆ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎತ್ತಿನ ಹೊಳೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಿಗೆ ಕೇವಲ 24 ಟಿಎಂಸಿ ನೀರ ನ್ನು ಮಾತ್ರ ತರಲಾಗುತ್ತಿದೆ. ಆ ಭಾಗದಲ್ಲಿ 2400 ಕ್ಕೂ ಹೆಚ್ಚು ಟಿಎಂಸಿ ನೀರು ಲಭ್ಯವಿದೆ. ಇದರಿಂದ ದಕ್ಷಿಣ ಕನ್ನಡ ಜನರಿಗೆ ಯಾವುದೇ ತೊಂದರೆಯಾಗು ವುದಿಲ್ಲ. ಆಗಿದ್ದರೂ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.
 ಅಷ್ಟಕ್ಷೂ ಎತ್ತಿನಹೊಳೆ ಯೋಜನೆಗೆ ನೀರನ್ನು ತರುತ್ತಿರುವುದು ಸಕಲೇಶಪುರದ ಕುಮಾರಧಾರದ ಎತ್ತಿನಹೊಳೆ, ಕಾಡುಮನೆ, ಎಲೆಹಳ್ಳಗಳಿಂದಲೇ ಹೊರತು, ದಕ್ಷಿಣ ಕರ್ನಾಟಕದಿಂದಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News