ಆನ್‌ಲೈನ್ ಮೂಲಕ ಪಿಯುಸಿ ಪ್ರಶ್ನೆಪತ್ರಿಕೆ ರವಾನೆ: ಸಚಿವ ಟಿ.ಬಿ.ಜಯಚಂದ್ರ
ಬೆಂಗಳೂರು, ಜೂ.7: 2017ನೆ ಸಾಲಿನ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಆನ್‌ಲೈನ್ ಮೂಲಕ ರವಾನೆ ಮಾಡುವ ಪದ್ಧತಿಯನ್ನು ಜಾರಿಗೆ ತರಲಾ ಗುವುದು ಎಂದು ಉನ್ನತ ಶಿಕ್ಷಣ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶ್ನೆಪತ್ರಿಕೆಗಳನ್ನು ಆನ್‌ಲೈನ್‌ನಲ್ಲಿ ರವಾನೆ ಮಾಡುವ ಪದ್ಧತಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿದೆ ಎಂದರು.
ಪಿಯುಸಿ ಪ್ರಶ್ನೆಪತ್ರಿಕೆಗಳನ್ನು ಆನ್‌ಲೈನ್‌ನಲ್ಲಿ ರವಾನೆ ಮಾಡುವುದರಿಂದ ಆರ್ಥಿಕವಾಗಿ ಹೆಚ್ಚು ಹೊರೆ ಏನು ಬೀಳುವುದಿಲ್ಲ. ಇದರ ಸಾಧಕ ಬಾಧಕಗಳ ಕುರಿತು ಪರಾಮರ್ಶಿಸಿ ವರದಿ ನೀಡುವಂತೆ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಜಯಚಂದ್ರ ಹೇಳಿದರು.
ಕೃತಕ ಮರಳು ತಯಾರಿಕೆಗೆ ಪ್ರೋತ್ಸಾಹ: ರಾಜ್ಯದಲ್ಲಿ ಮರಳಿನ ಕೊರತೆಯುಂಟಾಗಿ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಕೃತಕ ಮರಳು (ಎಂ-ಸ್ಯಾಂಡ್) ತಯಾರಿಕೆಗೆ ಪ್ರೋತ್ಸಾಹ ನೀಡಲು ಸರಕಾರ ಉದ್ದೇಶಿಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿಕಲಚೇತನ ವಿದ್ಯಾರ್ಥಿಗೆ ನೆರವಿನ ಭರವಸೆ: ಬಳ್ಳಾರಿ ಜಿಲ್ಲೆಯ ವಿಕಲಚೇತನ ವಿದ್ಯಾರ್ಥಿ(ಎರಡು ಕೈಗಳಿಲ್ಲದ) ಮುಸ್ತಫಾ ಪಿಯುಸಿ ಪರೀಕ್ಷೆಯಲ್ಲಿ ಶೇ.80 ರಷ್ಟು ಅಂಕಗಳನ್ನುಗಳಿಸಿದ್ದು, ಆತನ ಉನ್ನತ ಶಿಕ್ಷಣಕ್ಕೆ ನೆರವು ಕೋರಿ ಶಿಕ್ಷಕ ಗಾದಿ ಲಿಂಗಪ್ಪ ಸಚಿವರ ಬಳಿ ಕರೆದುಕೊಂಡು ಬಂದಿದ್ದರು.
ಈ ಸಂದರ್ಭದಲ್ಲಿ ವೈಯಕ್ತಿಕವಾಗಿ 10 ಸಾವಿರ ರೂ. ನಗದನ್ನು ವಿದ್ಯಾರ್ಥಿಗೆ ನೀಡಿದ ಜಯಚಂದ್ರ, ಮುಖ್ಯ ಮಂತ್ರಿಯನ್ನು ಭೇಟಿ ಮಾಡಿಸಿ ಉನ್ನತ ಶಿಕ್ಷಣಕ್ಕಾಗಿ ಸರಕಾರದ ವತಿಯಿಂದ ಅಗತ್ಯ ನೆರವು ಕೊಡಿಸುವ ಭರವಸೆಯನ್ನು ನೀಡಿದರು. ಮರಳಿನ ಕೊರತೆಯುಂಟಾಗಿ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಕೃತಕ ಮರಳು (ಎಂ-ಸ್ಯಾಂಡ್) ತಯಾರಿಕೆಗೆ ಪ್ರೋತ್ಸಾಹ ನೀಡಲು ಸರಕಾರ ಉದ್ದೇಶಿಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
- ಟಿ.ಬಿ. ಜಯಚಂದ್ರ, ಉನ್ನತ ಶಿಕ್ಷಣ ಹಾಗೂ ಕಾನೂನು ಸಚಿವ