ಅರಣ್ಯ ಅಭಿವೃದ್ಧಿಗೆ ವಾರ್ಷಿಕ 300 ಕೋಟಿ ರೂ. ಖರ್ಚು
ಬೆಂಗಳೂರು, ಜೂ.7: ಅರಣ್ಯ ಪ್ರದೇಶದ ವ್ಯಾಪ್ತಿ ದಿನೆ ದಿನೆ ಕಡಿಮೆಯಾಗುತ್ತಿದೆ. ಕಾಡು ಬೆಳೆಸಲು, ಗಿಡಗಳನ್ನು ನೆಡಲು ಪ್ರತೀ ವರ್ಷ 300 ಕೋಟಿ ರೂ. ವೆಚ್ಚ ಮಾಡಲಾ ಗುತ್ತಿದೆ. ಆದರೂ ಕಾಡು ಬೆಳೆಯುತ್ತಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಶಾಲೆಗಳಲ್ಲಿ ವನ ಮಹೋತ್ಸವ ಆಚರಿಸ ಬೇಕು. ಈ ಕೆಲಸ ಜೂನ್ ಮತ್ತು ಜುಲೈ ತಿಂಗಳಲ್ಲಿ ನೆರವೇರಬೇಕು. ಇದಕ್ಕಾಗಿ ಈ ಬಾರಿ ಎಂಟು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅರಣ್ಯ ಪ್ರದೇಶದಲ್ಲಿ 5.5 ಕೋಟಿ ಹಾಗೂ ಅರಣ್ಯೇತರ ಪ್ರದೇಶದಲ್ಲಿ 2.5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮ ದಲ್ಲಿ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರಕ್ಕೆ ಮುಖ್ಯಮಂತ್ರಿ ಮನವಿ ಮಾಡಿದರು.
ಕೆರೆ ಸಂಜೀವಿನಿ ಯೋಜನೆ ಪ್ರಗತಿ ಕುಂಠಿತವಾಗಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಇನ್ನು ಮುಂದೆ ಮಳೆಗಾಲಕ್ಕೆ ಮೊದಲೇ ಕೆರೆಗಳ ಹೂಳು ತೆಗೆಯುವ ಕಾರ್ಯ ಆಗಬೇಕು. ಇಲ್ಲದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿರುವ ಸಣ್ಣ ರೈತರಿಗೆ ತೊಂದರೆ ನೀಡಬಾರದು ಎಂಬ ಸುತ್ತೋಲೆ ಹೊರಡಿಸಲಾಗಿದೆ. ಆದರೆ ಈಗಲೂ ಕೆಲವೆಡೆ ರೈತರಿಗೆ ಕಿರುಕುಳ ಕೊಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅರಣ್ಯ ವಾಸಿಗಳಿಗೆ ಹಕ್ಕುಪತ್ರ ನೀಡುವತ್ತ ಗಮನ ಹರಿಸ ಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು. ಜಿಲ್ಲೆಗಳಿಗೆ ಭೇಟಿ ನೀಡಿದಾಗ ಸರಕಾರದ ಮಹತ್ವಾ ಕಾಂಕ್ಷೆಯ ಯೋಜನೆಗಳಿಗೆ ಒತ್ತು ನೀಡಿ ಅವುಗಳ ಪ್ರಗತಿ ಪರಿಶೀಲಿಸಿ, ಒಂದು ರಾತ್ರಿ ಆಯಾ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಿ ಎಂದು ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಲಹೆ ನೀಡಿದರು. ಮೈಸೂರು ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ: ಮೈಸೂರಿನ ಮಹಾರಾಣಿ ಕಲಾ ಹಾಗೂ ವಾಣಿಜ್ಯ ಕಾಲೇಜು ವಿದ್ಯಾ ರ್ಥಿನಿಯರ ವಸತಿ ನಿಲಯದಲ್ಲಿನ ಅವ್ಯವಸ್ಥೆ ಕುರಿತು ಸಭೆಯಲ್ಲಿ ತೀವ್ರ ಅಸಮಾಧಾನ ಹೊರ ಹಾಕಿದ ಮುಖ್ಯ ಮಂತ್ರಿ, ಕೂಡಲೇ ಪ್ರಾಂಶುಪಾಲರನ್ನು ಅಮಾನತು ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಹಾಸ್ಟೆಲ್‌ನ ಸ್ಥಿತಿಗತಿ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯ ದರ್ಶಿ ಭರತ್‌ಲಾಲ್ ಮೀನಾಗೆ ಸೂಚಿಸಿದ ಅವರು, ಈ ಹಾಸ್ಟೆಲ್ ಅವ್ಯವಸ್ಥೆಗಳ ಆಗರವಾಗಿದೆ. ತಾವು ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದಾಗ ಅಲ್ಲಿನ ವಿದ್ಯಾರ್ಥಿನಿ ಯರು ತಮಗೆ ಆಗುತ್ತಿರುವ ತೊಂದರೆ ಹೇಳಿಕೊಂಡು ಕಣ್ಣೀರು ಹಾಕಿದರು ಎಂದರು.
ಮುಖ್ಯಮಂತ್ರಿ ಜಿಲ್ಲೆಯಲ್ಲೆ ಈ ರೀತಿ ಆಗಬೇಕೇ? ಅಧಿಕಾರಿಗಳೇಕೆ ಹಾಸ್ಟೆಲ್‌ಗೆ ಭೇಟಿ ನೀಡಿ ಸಮಸ್ಯೆ ಬಗೆಹ ರಿಸುವ ಪ್ರಯತ್ನ ಮಾಡಿಲ್ಲ ಎಂದು ತರಾಟೆಗೆ ತೆಗೆದು ಕೊಂಡ ಮುಖ್ಯಮಂತ್ರಿ, ಊಟದ ವ್ಯವಸ್ಥೆಗೆ ವಿದ್ಯಾರ್ಥಿ ಗಳು ಮೂರು ವರ್ಷದಿಂದ ಹಣ ಪಾವತಿಸುವ ಪರಿಸ್ಥಿತಿ ಅಲ್ಲಿದೆ. ಅವರ ಹಣವನ್ನು ಕೂಡಲೆ ಮರು ಪಾವತಿಸುವ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು.
ನೀವು ಇಂಥದ್ದನ್ನು ಏಕೆ ನೋಡುವುದಿಲ್ಲ. ನಿಮಗೆ ಅನುಭವ ಇದೆ ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿರುವುದು. ಹೋಗಿ ನೋಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯ ದರ್ಶಿ ಅರವಿಂದಜಾಧವ್, ಅಪರ ಮುಖ್ಯ ಕಾರ್ಯ ದರ್ಶಿಗಳಾದ ಲತಾ ಕೃಷ್ಣರಾವ್, ಕೆ.ರತ್ನಪ್ರಭಾ, ಮಹೇಂದ್ರ ಜೈನ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ತುಷಾರ್ ಗಿರಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.