ಪಠ್ಯಕ್ರಮ ರಚನೆಯಲ್ಲಿ ಕೆಗಾರಿಕೆಗಳು ಒಳಗೊಳ್ಳಲಿ: ಪ್ರೊ.ಅನಿಲ್ ಸಹಸ್ರಬುಧೆ
ಒಟ್ಟು ನಗದು ಬಹುಮಾನ82
ಪ್ರಥಮ ರ್ಯಾಂಕ್ ವಿಜೇತರು91
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು66
ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು112
ಬೆಂಗಳೂರು, ಜೂ.7: ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಪಠ್ಯಕ್ರಮ ರಚನೆಯಲ್ಲಿ ಕೈಗಾರಿಕೆಗಳನ್ನು ತೊಡಗಿಸಿಕೊಳ್ಳುವತ್ತ ವಿಶ್ವವಿದ್ಯಾನಿಲಯಗಳು ಗಮನ ವಹಿಸಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಪ್ರೊ.ಅನಿಲ್ ಡಿ.ಸಹಸ್ರಬುಧೆ ಸೂಚಿಸಿದ್ದಾರೆ.
ಮಂಗಳವಾರ ಬೆಂಗಳೂರು ವಿಶ್ವವಿದ್ಯಾನಿಲಯ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ‘ಬೆಂಗಳೂರು ವಿವಿಯ 51ನೆ ವಾರ್ಷಿಕ ಘಟಿಕೋತ್ಸವ’ ಹಾಗೂ ‘ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
ವಿಶ್ವವಿದ್ಯಾನಿಲಯಗಳು ಕೈಗಾರಿಕೆಗಳೊಂದಿಗೆ ಸಂಪರ್ಕ ಸಾಧಿಸಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ದೊರಕುವಂತೆ ಮಾಡಬೇಕು. ಹಾಗೂ ಕೈಗಾರಿಕೆಗಳ ಸಹಕಾರದಿಂದ ಪ್ರಯೋಗಾಲಯ, ಕರಕುಶಲತೆಯ ತರಬೇತಿ, ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
ಸಂಶೋಧನೆ ಮತ್ತು ಅನ್ವೇಷಣೆ: ವಿದ್ಯಾರ್ಥಿಗಳನ್ನು ಸಂಶೋಧನಾ ಕ್ಷೇತ್ರದತ್ತ ಚಿಂತಿಸುವಂತೆ ವಿಶ್ವವಿದ್ಯಾ ನಿಲಯಗಳು ಪ್ರೋತ್ಸಾಹ ನೀಡಬೇಕು. ಇದಕ್ಕೆ ಸಂಬಂಧಿ ಸಿದಂತೆ ಅನ್ವೇಷಣಾ ಶಿಬಿರಗಳನ್ನು ಏರ್ಪಡಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ಸಹಾಯ ಮಾಡಬೇಕು ಎಂದು ಪ್ರೊ.ಅನಿಲ್ ಡಿ. ಸಹಸ್ರಬುಧೆ ಅವರು ಹೇಳಿದರು.
ವಿದ್ಯಾರ್ಥಿ ಹಾಗೂ ಶಿಕ್ಷಕವರ್ಗದ ನಡುವೆ ಉತ್ತಮ ವಾದ ಸಂಬಂಧವನ್ನು ಏರ್ಪಡಿಸಬೇಕು. ಅಗತ್ಯವಿದ್ದರೆ ವಿದೇಶಿ ಶಿಕ್ಷಕರನ್ನು ಆಹ್ವಾನಿಸಿ ವಿದ್ಯಾರ್ಥಿಗಳ ಬೌದ್ಧಿಕತೆ ಯನ್ನು ಹೆಚ್ಚಿಸಬೇಕು. ಈ ರೀತಿಯಲ್ಲಿ ಪರಸ್ಪರ ಹೊಂದಾಣಿಕೆಯಿಂದ ಮುಂದುವರಿದರೆ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಯತ್ತ ಸಾಗಿಸಬಹುದೆಂದು ಅವರು ಅಭಿಪ್ರಾಯಿಸಿದರು.
ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದೆ. ಅದರಲ್ಲೂ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರ ಗಳಲ್ಲಿ ಕಲಿತದ್ದು ಬಹುಬೇಗ ಸವಕಲಾಗಿ ಬಿಡುತ್ತದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ನಿರಂತರವಾದ ಸಂಶೋಧನೆ ನಡೆಯುತ್ತಲೆ ಇರಬೇಕು. ಇದಕ್ಕೆ ಬೇಕಾದ ಅಗತ್ಯ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು ವಿಶ್ವವಿದ್ಯಾನಿಲಯಗಳ ಕರ್ತವ್ಯವಾಗಿದೆ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳಲ್ಲಿ ರ್ಯಾಂಕ್ ಪಡೆದ ಬೆಂವಿವಿ ವಿದ್ಯಾರ್ಥಿಗಳಿಗೆ ರಾಜ್ಯಪಾಲವಜುಭಾಯಿ ವಾಲಾ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಈ ವೇಳೆ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ, ಬೆಂವಿವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು ವಿಶ್ವವಿದ್ಯಾನಿಲಯವು ಮೂಲಭೂತ ಸೌಕರ್ಯ, ಗ್ರಂಥಾಲಯ ಸಂಪನ್ಮೂಲ, ಕಲಿಕೆ-ಬೋಧನೆ, ಸಂಶೋಧನೆ ಮತ್ತು ನವೀನತೆಗಳಲ್ಲಿ ದೇಶದಲ್ಲೆ ಮುಂಚೂಣಿಯಲ್ಲಿದೆ. ದೇಶದ ಬಹುತೇಕ ಉನ್ನತ ಶಿಕ್ಷಣ ಸಮೀಕ್ಷೆಗಳಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ.
-ಪ್ರೊ.ಅನಿಲ್ ಡಿ.ಸಹಸ್ರಬುಧೆ. ಅಧ್ಯಕ್ಷ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್
ನನ್ನ ಊರು ಗಡಿಭಾಗವಾದ ಕೆಜಿಎಫ್. ತಂದೆ ಟೈಲರ್ ಕೆಲಸ ಮಾಡುತ್ತಾರೆ. ಹೀಗಾಗಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಮಾತ್ರ ನಮ್ಮ ಮನೆಗೆ ಒಳ್ಳೆಯ ಭವಿಷ್ಯವಿದೆ ಎಂದು ನನಗೆ ಬಾಲ್ಯದಲ್ಲೆ ಅನಿಸಿತು. ಅಂದಿನಿಂದಲೂ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿದೆ. ಪದವಿಯಲ್ಲಿ ಶೇ.93ರಷ್ಟು ಅಂಕಗಳಿಸಿದೆ. ಇದೀಗ ಭೌತಶಾಸ್ತ್ರದಲ್ಲಿ ಮೊದಲ ರ್ಯಾಂಕ್ ಪಡೆದಿದ್ದೇನೆ.
- ಕೃಷ್ಣಮೂರ್ತಿ, ಭೌತಶಾಸ್ತ್ರ ವಿದ್ಯಾರ್ಥಿ