×
Ad

ನರೇಶ್ ಶೆಣೈ ಜಾಮೀನು ಆದೇಶ ಕಾಯ್ದಿರಿಸಿದ ಹೆಕೋರ್ಟ್

Update: 2016-06-07 22:45 IST

ಬೆಂಗಳೂರು, ಜೂ.7: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡು ರಂಗ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಮೋ ಬ್ರಿಗೇಡ್ ನಾಯಕ ನರೇಶ್ ಶೆಣೈಗೆ ಜಾಮೀನು ನೀಡುವ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಈ ಸಂಬಂಧ ನರೇಶ್ ಶೆಣೈ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ, ಆದೇಶವನ್ನು ಕಾಯ್ದಿರಿಸಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಬಾಳಿಗ ಹತ್ಯೆ ನಡೆ ಯುವಾಗ ನಮೋ ಬ್ರಿಗೇಡ್ ನಾಯಕ ಶೆಣೈ ಅವರು ಸ್ಥಳದಲ್ಲಿ ಇರಲಿಲ್ಲ. ಆದರೆ, ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸರಕಾರಿ ವಕೀಲ ವಾದಿಸಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರು ಮಾರ್ಚ್ 21ರಂದು ಮಂಗಳೂರು ನಗರದ ಮನೆಯಿಂದ ಬೈಕ್‌ನಲ್ಲಿ ಹೊರಟಾಗ ದುಷ್ಕರ್ಮಿಗಳಿಬ್ಬರು ದಾರಿ ಕೇಳುವ ನೆಪದಲ್ಲಿ ನಿಲ್ಲಿಸಿ ಹತ್ಯೆಗೈದು ಪರಾರಿಯಾಗಿದ್ದರು. ಈ ಹತ್ಯೆ ಪ್ರಕರಣದಲ್ಲಿ ನರೇಶ್ ಶೆಣೈ ಕೂಡ ಪ್ರಮುಖ ಆರೋಪಿಯಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಶೆಣೈಗೆ ಜಾಮೀನು ನೀಡುವ ಆದೇಶವನ್ನು ಕಾಯ್ದಿರಿಸಿತು.
   ಪ್ರಕರಣದ ಹಿನ್ನೆಲೆ: ಮಾರ್ಚ್ 21ರಂದು ಆರ್‌ಟಿಐ ಕಾರ್ಯಕರ್ತ ಬಾಳಿಗಾ ಅವರನ್ನು ಅವರ ಮನೆಯಿಂದ ಕೆಲವೇ ದೂರದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮಂಗಳೂರು ನಗರದ ಕಾವೂರು ಬಟ್ರೆಕುಮೇರು ಪದವಿನಂಗಡಿಯ ವಿನಿತ್ ಪೂಜಾರಿ(26), ಶಕ್ತಿನಗರದ ಕ್ಯಾಶ್ಯೂ ಫಾಕ್ಟರಿ ಬಳಿಯ ನಿತೀಶ್‌ದೇವಾಡಿ(23)ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಹಾಗೂ ನಮೋ ಬ್ರಿಗೇಡ್ ನಾಯಕ ನರೇಶ್ ಶೆಣೈರನ್ನು ಬಂಧಿಸಲು ಶೋಧ ಕಾರ್ಯ ಕೈಗೊಂಡಿದ್ದರು. ಬಂಧನದ ಭೀತಿಯಲ್ಲಿದ್ದ ನರೇಶ್ ಶೆಣೈಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News